ಮಂಗಳೂರು, ಜೂ 16 (DaijiworldNews/MS): ಹೋಟೆಲ್ ಕಾರ್ಮಿಕರಿಗೆ ಮಂಗಳೂರು ಹೋಟೆಲ್ ಅಸೋಸಿಯೇಷನ್ ನ ವತಿಯಿಂದ ಉಚಿತವಾಗಿ ಕೋವಿಡ್ 19 ಲಸಿಕೆಯನ್ನುನೀಡಲಾಯಿತು.
ನಗರದ ಮಲ್ಲಿಕಟ್ಟೆಯ ಲಯನ್ಸ್ ಸೇವಾ ಮಂದಿರದಲ್ಲಿ ಈ ಲಸಿಕಾ ಶಿಬಿರ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರಾದ ಡಾ.ಭರತ್ ಶೆಟ್ಟಿ ಈ ಮೊದಲು ಜನರು ಕೆಲವು ಊಹಾಪೋಹಗಳಿಂದ ಲಸಿಕೆ ಪಡೆಯಲು ಹಿಂಜರಿಯುತ್ತಿದ್ದರು, ಆದ್ರೆ ಈಗ ಜನ ಎಚ್ಚೆತ್ತುಕೊಂಡಿದ್ದಾರೆ. ಜನರು ಲಸಿಕೆಯ ಬಗ್ಗೆ ಯಾವುದೇ ಭಯ ಪಡಬಾರದು ಲಸಿಕೆಯಿಂದ ಯಾವುದೇ ರೀತಿಯ ಅಡ್ಡ ಪರಿಣಾಮ ಇಲ್ಲ ಎಂದು ತಿಳಿಸಿದರು. ಲಸಿಕೆ ಪಡೆದರೆ ನಮಗೆ ಮುಂದಿನ ದಿನಗಳಲ್ಲಿ ಕೊರೋನಾ ನಿಯಂತ್ರಣ ಮಾಡಲು ಸಾಧ್ಯ, ಸರ್ಕಾರ ಕರೊನಾ ನಿಯಂತ್ರಣಕ್ಕೆ ಹೊರಡಿಸಿರುವ ಮಾರ್ಗಸೂಚಿಗಳನ್ನು ಜನ ಪಾಲಿಸಿದಲ್ಲಿ ಕೊರೊನಾ ವಿರುದ್ದದ ಹೋರಾಟದಲ್ಲಿ ಜಯ ಗಳಿಸಲು ಸಾಧ್ಯ ಎಂದು ಕರೆ ನೀಡಿದರು. ಲಸಿಕೆ ಪಡೆದವರು ಸಹ ಲಸಿಕೆ ಪಡೆದಿದ್ದೇವೆ ಎಂದು ನಿರ್ಲಕ್ಷ್ಯ ಮಾಡಬೇಡಿ, ಸಾಮಾಜಿಕ ಅಂತರ ಪಾಲನೆ, ಮಾಸ್ಕ್ ಕಡ್ಡಾಯವಾಗಿ ಧರಿಸಿ ಕೊರೊನಾ ನಿಯಂತ್ರಣ ನಿಯಮ ಪಾಲಿಸಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಂಗಳೂರು ಹೊಟೇಲ್ ಅಸೋಸಿಯೇಶನ್ ಗೌರವಾಧ್ಯಕ್ಷ ರಾಜ್ ಗೋಪಾಲ್ ರೈ, ಪಾಲಿಕೆ ಆರೋಗ್ಯ ಅಧಿಕಾರಿ ಮಂಜಯ್ಯ ಶೆಟ್ಟಿ, ಅಧ್ಯಕ್ಷರಾದ ಚಂದ್ರಹಾಸ ಶೆಟ್ಟಿ,ಯುವ ಮೋರ್ಚಾ ಅಧ್ಯಕ್ಷ ಸಚಿನ್ ರೈ, ನಿಶಾಂಕ್ ಸುವರ್ಣ, ಅಬ್ರಾರ್, ಡಾಕ್ಟರ್ ಜಗದೀಶ್, ಡಾಕ್ಟರ್ ವಿದ್ಯಾ, ಅಶೋಕ್, ವಿಕಾಸ್, ರೂಪೇಶ್ ಉಪಸ್ಥಿತರಿದ್ದರು.