ನವದೆಹಲಿ, ಅ 05(SM): 'ದೇವಾಲಯಗಳು, ಮಂದಿರಗಳು ಬಿಜೆಪಿಯ ಸ್ವತ್ತೇ? ಧಾರ್ಮಿಕ ಸ್ಥಳಗಳಿಗೆ ನಾನು ಹೋದರೆ ಅದರಲ್ಲಿ ತಪ್ಪೇನಿದೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.
ದೆಹಲಿಯಲ್ಲಿ ಈ ಬಗ್ಗೆ ಮಾತನಾಡಿದ ಅವರು, ಬಿಜೆಪಿ ಎಲ್ಲ ಕಡೆಯಲ್ಲೂ ಸರ್ವಾಧಿಕಾರಿಯಂತೆ ವರ್ತಿಸುತ್ತಿದೆ. ಎಲ್ಲವೂ ತನ್ನದೇ ಸ್ವತ್ತು ಎಂದುಕೊಂಡಿದೆ. ಬಿಜೆಪಿಯವರು ಮಾತ್ರ ದೇವಾಲಯಕ್ಕೆ ಹೋಗಬೇಕೆ? ನಾನು ಹೋಗಬಾರದೆ? ದೇವಾಲಯಗಳೇನು ಅವರ ಸ್ವತ್ತೇ? ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
"ಎಲ್ಲ ಜ್ಞಾನವೂ ತಮಗೊಬ್ಬರಿಗೇ ಇದೆ ಎಂದು ಬಿಜೆಪಿಯವರ ಭಾವನೆಯಾಗಿದೆ. ತಮಗೆ ಮಾತ್ರವೇ ಎಲ್ಲಾ ಅರ್ಥವಾಗುತ್ತದೆ ಎಂದು ಬಿಜೆಪಿಗರು ತಿಳಿದುಕೊಂಡಿದ್ದಾರೆ. ಮಾತುಕತೆಯ ಮೂಲಕ ಸಮಸ್ಯೆಯನ್ನು ಬಗೆಹರಿಸಬಹುದು ಎಂದರೆ ಅದು ನಂಬುವುದಿಲ್ಲ.
ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಹಿಂದೊಮ್ಮೆ ನನ್ನನ್ನು ಭೇಟಿಯಾಗಿದ್ದರು. ಆ ಸಂದರ್ಭದಲ್ಲಿ, ಕಾಶ್ಮೀರದಲ್ಲಿ ಗಂಭೀರ ಸಮಸ್ಯೆ ಇರುವ ಬಗ್ಗೆ ನಾನು ಅವರ ಗಮನ ಸೆಳೆದಿದ್ದೆ. ಆದರೆ ಅಂತಹ ಸಮಸ್ಯೆ ಇಲ್ಲ ಎನ್ನುವ ಮೂಲಕ ಅವರು, ಮಾತು ಮುಗಿಸಿದ್ದರು ಎಂಬುವುದಾಗಿ ಹಳೆಯ ವಿಚಾರವನ್ನು ರಾಹುಲ್ ನೆನಪಿಸಿಕೊಂಡಿದ್ದಾರೆ.