ಉಡುಪಿ, ಜೂ 14 (DaijiworldNews/MS): ಕೋವಿಡ್ ವ್ಯಾಕ್ಸಿನ್ ತೆಗೆದುಕೊಂಡ ಪರಿಣಾಮ ದೇಹದಲ್ಲಿ ಅಯಸ್ಕಾಂತೀಯ ಶಕ್ತಿಯಿಂದಾಗಿ ಕಬ್ಬಿಣದ ವಸ್ತುಗಳು ದೇಹಕ್ಕೆ ಅಂಟಿಕೊಳ್ಳುತ್ತವೆ ಎನ್ನುವ ವಿಡಿಯೋ ಒಂದು ಇಂದು ಉಡುಪಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಉಡುಪಿಯ ಪಿಪಿಸಿ ಆಡಿಟೋರಿಯಂ ಬಳಿ ಇರುವ ರಾಮ್ ದಾಸ್ ಶೇಟ್ ಎಂಬವರು ತಮ್ಮ ದೇಹದಲ್ಲಿ ಕೊವೀಡ್ ವ್ಯಾಕ್ಸೀನ್ ಪಡೆದುಕೊಂಡ ಪರಿಣಾಮದಿಂದಾಗಿ ಅಯಸ್ಕಾಂತೀಯ ಶಕ್ತಿಯಿಂದಾಗಿ ನಾಣ್ಯ ಸೇರಿದಂತೆ ಕಬ್ಬಿಣದ ವಸ್ತುಗಳು ಅಂಟಿಕೊಳ್ಳುವ ಕುರಿತು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ. ವಿಡಿಯೋದಲ್ಲಿ ವ್ಯಕ್ತಿಯೊಬ್ಬರು ರಾಮ್ ದಾಸ್
ಶೇಟ್ ಇವರ ದೇಹಕ್ಕೆ ಸೌಟು, ನಾಣ್ಯ ಮುಂತಾದ ಕಬ್ಬಿಣದ ವಸ್ತುಗಳನ್ನು ದೇಹದ ಹತ್ತಿರ ತಂದಾಗ ಅಯಸ್ಕಾಂತೀಯ ಬಲದಿಂದ ಅವುಗಳು ದೇಹಕ್ಕೆ ಅಂಟಿಕೊಳ್ಳುತ್ತವೆ.
ಇನ್ನು ಈ ಬಗ್ಗೆ ಮಾಧ್ಯಮದವರೊಂದಿಗೆ ಮಾಹಿತಿ ಹಂಚಿಕೊಂಡ ರಾಮ್ ದಾಸ್ ಶೇಟ್, " ನಾನು ವಾಟ್ಸಾಪ್ ನಲ್ಲಿ ಪುಣೆಯ ವ್ಯಕ್ತಿಯೊಬ್ಬರು ವ್ಯಾಕ್ಸೀನ್ ಪಡೆದುಕೊಂಡ ಮೇಲೆ ತಮ್ಮ ದೇಹಕ್ಕೆ ಕಬ್ಬಿಣದ ವಸ್ತುಗಳು ಅಂಟಿಕೊಳ್ಳುತ್ತಿವೆ ಎಂಬ ಕುರಿತು ಹಾಕಿದ್ದ ವಿಡಿಯೋ ನೋಡಿದ್ದೆ. ಇದರ ಆಧಾರದಲ್ಲಿ ನನ್ನ ದೇಹದ ಮೇಲೇ ನಾಣ್ಯ ವನ್ನು ತಂದಾಗ ನನ್ನ ದೇಹಕ್ಕೆ ಕೂಡಾ ನಾಣ್ಯ ಅಂಟಿಕೊಳ್ಳತೊಡಗಿತು. ನನ್ನ ಸ್ನೇಹಿತರಿಗೆ ವಿಷಯ ತಿಳಿಸಿದಾಗ ಅವರು ನನಗೆ ದೈರ್ಯ ಹೇಳಿ ವೈದ್ಯರನ್ನು ಸಮಾಲೋಚಿಸುವಂತೆ ಸಲಹೆ ನೀಡಿದರು" ಎಂದರು.
ಇದೀಗ ವಿಡಿಯೋ ವೈರಲ್ ಆದ ಬಳಿಕ ರಾಮ್ ದಾಸ್ ಅವರನ್ನು ಉಡುಪಿ ಜಿಲ್ಲಾ ಆಸ್ಪತ್ರೆಯಲ್ಲಿ ತಪಸಣೆ ನಡೆಸಲಾಗುತ್ತಿದೆ.
ಇನ್ನು ಈ ವೈರಲ್ ವಿಡಿಯೋದ ಕುರಿತು ಪ್ರತಿಕ್ರಿಯೆ ನೀಡಿದ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಅವರು "ಲಸಿಕೆ ಪಡೆದುಕೊಂಡ ಕಾರಣ ಇಂತಹ ಅಯಸ್ಕಾಂತೀಯ ಶಕ್ತಿ ದೇಹದಲ್ಲಿ ಬರುತ್ತದೆ ಎಂಬುವುದು ಸುಳ್ಳು ವಿಚಾರ. ರಾಮ್ ದಾಸ್ ಅವರನ್ನು ಜಿಲ್ಲಾ ಆರೋಗ್ಯಾಧಿಕಾರಿಗಳು ತಪಾಸಣೆಗೆ ಬರಲು ಹೇಳಿದ್ದಾರೆ. ರಾಮ್ ದಾಸ್ ಅವರು ಎಪ್ರಿಲ್ ೨೮ ರಂದು ಮೊದಲ ಡೋಸ್ ವ್ಯಾಕ್ಸೀನ್ ಪಡೆದುಕೊಂಡಿದ್ದು ವ್ಯಾಕ್ಸೀನ್ ಪಡೆದುಕೊಂಡು ಒಂದು ತಿಂಗಳಿಗೂ ಅಧಿಕ ಸಮಯ ಆಗಿದೆ. ಅವರಿಗೆ ಮದುಮೇಹ, ಬಿಪಿ ಕಾಯಿಲೆ ಕೂಡಾ ಇದೆ. ಅವರನ್ನು ತಪಾಸಣೆಗೆ ಒಳಪಡಿಸಲಾಗಿದೆ. ಸಾರ್ವಜನಿಕರು ವದಂತಿಗಳನ್ನು ನಂಬದೆ ಭಯಪಡದೆ ವ್ಯಾಕ್ಸಿನ್ ಪಡೆದುಕೊಳ್ಳಬೇಕು" ಎಂದು ಸ್ವಷ್ಟಪಡಿಸಿದ್ದಾರೆ.
ಒಟ್ಟಿನಲ್ಲಿ ವ್ಯಾಕ್ಸಿನ್ ಕುರಿತಾದ ವದಂತಿಗಳ ಸಾಲಿನಲ್ಲಿ ಈ ವಿಡಿಯೋ ಹೊಸ ಸೇರ್ಪಡೆಯಾಗಿದೆ.