ಬೆಂಗಳೂರು, ಅ05(SS): ಯಾವುದೋ ಕೆಲ ಮಾಧ್ಯಮಗಳು ಮತ್ತು ಸಮೀಕ್ಷೆಗಳು ಮೋದಿ ನೇತೃತ್ವದ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂಬುದನ್ನು ಹೇಳಿದ ತಕ್ಷಣ ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂದು ನಟ ಪ್ರಕಾಶ್ ರೈ ಹೇಳಿದ್ದಾರೆ.
ನಗರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರದಲ್ಲಿ ಯಾವ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂಬುವುದನ್ನು ಜನ ತೀರ್ಮಾನ ಮಾಡಲಿದ್ದಾರೆ. ಯಾವುದೋ ಕೆಲ ಮಾಧ್ಯಮಗಳು ಮತ್ತು ಕೆಲ ರಾಜಾಕೀಯ ಪಕ್ಷಗಳ ಪರ ಇರುವ ಸಂಸ್ಥೆಗಳು ಸಮೀಕ್ಷೆ ನಡೆಸಿ ಮೋದಿ ಮತ್ತೊಮ್ಮೆ ಅಧಿಕಾರಕ್ಕೆ ಬರುತ್ತಾರೆ ಎಂಬುದುನ್ನು ಬಿತ್ತರಿಸಿದರೆ ನಂಬಲು ಸಾಧ್ಯವಿಲ್ಲ. ಆ ಮಾಧ್ಯಮಗಳ ಟಿಆರ್ಪಿ ಹೆಚ್ಚಳ ಮಾಡಿಕೊಳ್ಳಲು ಅಥವಾ ಬೇರೆ ಯಾವುದೋ ಕಾರಣಕ್ಕೆ ಸುಳ್ಳು ಸುದ್ದಿಗಳನ್ನು ತೋರಿಸುತ್ತವೆ ಎಂದು ವ್ಯಂಗ್ಯ ಮಾಡಿದರು.
ಆದರೆ ಜನ ಅಷ್ಟುಸುಲಭವಾಗಿ ಇದನ್ನು ನಂಬುವುದಿಲ್ಲ. ಈ ಹಿಂದೆ ಮಾಡಿದ ಅದೆಷ್ಟೊ ಸಮೀಕ್ಷೆಗಳು ತಳೆಕೆಳಗಾಗಿರುವ ಅಂಶ ನಮ್ಮ ಮುಂದೆ ಇದೆ. ಮತ್ತೊಮ್ಮೆ ಮೋದಿ ನೇತೃತ್ವದ ಬಿಜೆಪಿ ಆಧಿಕಾರಕ್ಕೆ ಬರುತ್ತದೆ ಎಂದರೆ ಬರಲಿ. ಈ ದೇಶದ ಜನ ಯಾವ ಪಕ್ಷಕ್ಕೆ ಬಹುಮತ ಕೊಡುತ್ತಾರೋ ಅದನ್ನು ಒಪ್ಪಿಕೊಳ್ಳಬೇಕು. ಯಾವುದೇ ರಾಜಕೀಯ ಪಕ್ಷಗಳು ಮತ್ತು ಮಾಧ್ಯಮಗಳು ಇಂತಹವರಿಗೆ ಮತ ಹಾಕಬೇಕು ಎಂದಾಕ್ಷಣ ಜನ ಮತ ಹಾಕುವುದಿಲ್ಲ ಎಂದವರು ತಿಳಿಸಿದರು.
ನಾನು ರಾಜಕಾರಣಿಯೂ ಅಲ್ಲ, ಯಾವ ರಾಜಕೀಯ ಪಕ್ಷಕ್ಕೂ ಸೇರಿದವನಲ್ಲ. ಸಂವಿಧಾನದ ಪರ ಸಮಾಜಮುಖಿಯಾಗಿ ಕೆಲಸ ಮಾಡುವವರ ಪರ ಮತ್ತು ಮಾಡುವುದಷ್ಟೇ ನನ್ನ ಉದ್ದೇಶ ಎಂದು ಹೇಳಿದ್ದಾರೆ.
ಕೇವಲ ಚುನಾವಣೆ ಸಮಯದಲ್ಲಿ ಉತ್ತಮ ಅಭ್ಯರ್ಥಿಗಳಿಗೆ ಮತಹಾಕಿ ಎಂದು ನಾನು ಕೇಳುತ್ತೇನೆ. ಆ ಕೆಲಸವನ್ನು ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಕೈಗೊಳ್ಳುತ್ತೇನೆ ಎಂದು ತಿಳಿಸಿದರು.