ತಿರುವನಂತಪುರ, ಅ05(SS): ವಿಶ್ವ ವಿಖ್ಯಾತ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ಮಹಿಳೆಯರು ಪ್ರವೇಶಿಸಬಹುದು ಎಂದು ಸುಪ್ರೀಂಕೋರ್ಟ್ ನೀಡಿದ ತೀರ್ಪಿನಿಂದ ಎಲ್ಲೆಡೆ ಭಾರೀ ವಿವಾದ ಸೃಷ್ಟಿಯಾಗಿದೆ. ಮಾತ್ರವಲ್ಲ, ಶಬರಿಮಲೆ ಗಿರಿದೇಗುಲಕ್ಕೆ ಎಲ್ಲ ವಯೋಮಾನದ ಹೆಣ್ಮಕ್ಕಳ ಪ್ರವೇಶ ವಿಷಯದಲ್ಲಿ ಸುಪ್ರೀಂ ಕೋರ್ಟ್ ತಾಳಿರುವ ನಿರ್ಧಾರವನ್ನು ಬೆಂಬಲಿಸುವ ಕೇರಳ ರಾಜ್ಯ ಸರಕಾರದ ನಿಲುವನ್ನು ಬದಲಾಯಿಸಬೇಕೆಂಬ ಆಗ್ರಹಗಳು ಹೆಚ್ಚಾಗುತ್ತಿದೆ.
ಶಬರಿಮಲೆ ಅಯ್ಯಪ್ಪಸ್ವಾಮಿ ದೇವಾಲಯಕ್ಕೆ ಮಹಿಳೆಯರಿಗೆ ಪ್ರವೇಶ ನೀಡಿರುವ ವಿಚಾರದಲ್ಲಿ, ಸುಪ್ರೀಂಕೋರ್ಟ್ ತೀರ್ಪಿನ ವಿರುದ್ದ ಅಸಮಾಧಾನ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ತೀರ್ಪಿನ ವಿರುದ್ದ ಮೇಲ್ಮನವಿ ಸಲ್ಲಿಸಲು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಒತ್ತಡ ಹೆಚ್ಚಾಗುತ್ತಿದ್ದು, ಬಿಜೆಪಿ ಅಧಿಕೃತವಾಗಿ ಆಖಾಡಕ್ಕಿಳಿದಿದೆ.
ಈ ನಡುವೆ ಧಾರ್ಮಿಕ ವಿಚಾರದ ಹೋರಾಟವೊಂದು ರಾಜಕೀಯ ಆಯಾಮ ಪಡೆಯುವ ಸಾಧ್ಯತೆ ದಟ್ಟವಾಗಿದೆ. ಹಿಂದೂಗಳ ಭಾವನೆಗೆ ಅಡ್ಡಿ ಆಗುವಂತಿದ್ದರೆ, ಅದರ ವಿರುದ್ದ ನಾವು ಹೋರಾಡುತ್ತೇವೆ ಎಂದು ಬಿಜೆಪಿ ಮತ್ತು ಕಾಂಗ್ರೆಸ್ ಹೇಳಿದೆ.
ಮಾತ್ರವಲ್ಲ, ತಿರುವನಂತಪುರದಲ್ಲಿರುವ ದೇವಸ್ವಂ ಮಂಡಳಿಯ ಕಚೇರಿ ಎದುರು ಬಿಜೆಪಿ ಮಹಿಳಾ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
ಶಬರಿಮಲೆ ದೇವಾಲಯಕ್ಕೆ ಮಹಿಳೆಯರ ಪ್ರವೇಶ ನಿಷೇಧ ಪಾಲಿಸಲು ತಮಿಳುನಾಡಿನಲ್ಲಿ ಕಳೆದ ವರ್ಷ ಜಲ್ಲಿಕಟ್ಟು ಪರವಾಗಿ ನಡೆದ ಹೋರಾಟದಂತೆ ಚಳುವಳಿ ನಡೆಸಲಾಗುವುದು ಎಂದು ತಿರುವಾಂಕೂರು ದೇವಸ್ವ ಮಂಡಳಿಯೂ ತಿಳಿಸಿದೆ.