ಕಣ್ಣೂರು, ಅ05(SS): ಕೇರಳದ ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಡಿ.9ರಂದು ಅಂತಾರಾಷ್ಟ್ರೀಯ ಸೇವೆಯೊಂದಿಗೆ ಉದ್ಘಾಟನೆಗೊಳ್ಳಲಿದ್ದು, ಈ ಮೂಲಕ ನಾಲ್ಕು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹೊಂದಿದ ಏಕೈಕ ರಾಜ್ಯ ಎಂಬ ಹೆಗ್ಗಳಿಕೆಗೆ ಕೇರಳ ಸಾಕ್ಷಿಯಾಗಲಿದೆ.
ಕೊಚ್ಚಿ, ತಿರುವನಂತಪುರ, ಕಲ್ಲಿಕೋಟೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ಹೊಂದಿದೆ. ಇದೀಗ ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಡಿ.9ರಂದು ಉದ್ಘಾಟನೆಗೊಳ್ಳಲಿದೆ ಎಂದು ಉನ್ನತ ಮೂಲಗಳು ತಿಳಿಸಿದೆ.
ವಿಮಾನ ನಿಲ್ದಾಣ ಪ್ರಾಧಿಕಾರದ ಪ್ರಕಾರ ಭಾರತದಲ್ಲಿನ 34 ವಿಮಾನ ನಿಲ್ದಾಣಗಳು ಅಂತಾರಾಷ್ಟ್ರೀಯ ವಿಮಾನ ಸೇವೆ ಹೊಂದಿವೆ. ಇದರಲ್ಲಿ 26ರಷ್ಟು ಅಂತಾರಾಷ್ಟ್ರೀಯ ಮಾನ್ಯತೆಗಳನ್ನು ಹೊಂದಿವೆ. ಇವುಗಳ ಪೈಕಿ 20ರಷ್ಟು ಪ್ರಾಧಿಕಾರದ ಅಧೀನದಲ್ಲಿಯೂ, ಆರು ಖಾಸಗಿ ವಲಯದಲ್ಲೂ, ಉಳಿದ 8ರಷ್ಟು ಕಸ್ಟಮ್ಸ್ ವಿಮಾನ ನಿಲ್ದಾಣಗಳ ವಿಭಾಗದಲ್ಲಿ ಒಳಗೊಂಡಿವೆ.
ಕಣ್ಣೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಕಾರ್ಯದಲ್ಲಿ ಗಣನೀಯ ಪ್ರಗತಿ ಸಾಧಿಸಲಾಗಿದ್ದು, ರನ್ವೇ ಮತ್ತು ಏರ್ಸೈಡ್ ಕಾಮಗಾರಿ 694 ಕೋಟಿ ರೂಪಾಯಿ ವೆಚ್ಚ ತಗುಲಿದೆ. ಟರ್ಮಿನಲ್ ಕಟ್ಟಡ, ಮೆಟಲ್ ಡಿಟೆಕ್ಟರ್, ಬ್ಯಾಗೇಜ್ ನಿರ್ವಹಣೆ ವ್ಯವಸ್ಥೆ, ಚೆಕ್ ಇನ್ ಕೌಂಟರ್, ಎಮಿಗ್ರೇಶನ್ ಚೆಕ್ಪಾಯಿಂಟ್, ಲಿಫ್ಟ್, ಎಸ್ಕಲೇಟರ್ ಮತ್ತು ಪ್ರಯಾಣಿಕರ ವಿಮಾನ ಏರುವ ಸೇತುವೆ ಕಾಮಗಾರಿಗಳು ಈಗಾಗಲೇ 498 ಕೋಟಿ ವೆಚ್ಚದಲ್ಲಿ ಪೂರ್ಣಗೊಂಡಿವೆ.
ಎಮಿರೇಟ್ಸ್, ಇತಿಹಾದ್, ಫ್ಲೈ ದುಬೈ, ಏರ್ ಅರೇಬಿಯಾ, ಒಮನ್ ಏರ್, ಕತಾರ್ ಏರ್ವೇಸ್, ಗಲ್ಫ್ ಏರ್, ಸೌದಿಯಾ, ಸಿಲ್ಕ್ ಏರ್, ಏರ್ ಏಷ್ಯಾ, ಮಲಿಂದೊ ಏರ್, ಏರ್ ಇಂಡಿಯಾ, ಏರ್ ಇಂಡಿಯಾ ಎಕ್ಸ್ಪ್ರೆಸ್, ಜೆಟ್ ಏರ್ವೇಸ್, ಇಂಡಿಗೊ, ಸ್ಪೈಸ್ ಜೆಟ್ ಹಾಗೂ ಗೋ ಏರ್ ಈಗಾಗಲೇ ವಿಮಾನಗಳನ್ನು ಆರಂಭಿಸಲು ಒಪ್ಪಿಕೊಂಡಿವೆ ಎಂದು ಮೂಲಗಳು ತಿಳಿಸಿದೆ.
ವಿಮಾನ ನಿಲ್ದಾಣದ ಭದ್ರತೆಗಾಗಿ 613 ಮಂದಿ ಸಿಐಎಸ್ಎಫ್ ಸಿಬ್ಬಂದಿಗಳನ್ನು, ಎಮಿಗ್ರೇಶನ್ ಕ್ಲಿಯರೆನ್ಸ್ಗೆ ರಾಜ್ಯ ಪೊಲೀಸರನ್ನು ನಿಯೋಜಿಸಲಾಗುವುದು ಎಂದು ತಿಳಿದುಬಂದಿದೆ.