ನವದೆಹಲಿ, ಅ05(SS): ಪ್ರಧಾನಿ ನರೇಂದ್ರ ಮೋದಿ ಅವರ ನಿಷ್ಠಾವಂತ ಅಭಿಮಾನಿ ಎಂದೇ ಕರೆಯಲಾಗುತ್ತಿದ್ದ ಮತ್ತು ಹೋಲಿಕೆಯಲ್ಲಿ ಅವರನ್ನೇ ಹೋಲುವ ಅಭಿನಂದನ್ ಪಾಠಕ್ ಬಿಜೆಪಿಗೆ ಗುಡ್ ಬೈ ಹೇಳಿ ಕಾಂಗ್ರೆಸ್ ಸೇರಲು ನಿರ್ಧರಿಸಿದ್ದಾರೆ.
ಅಭಿನಂದನ್ ಪಾಠಕ್ ಶಹರನ್ ಪುರ ನಿವಾಸಿಯಾಗಿದ್ದು, ಈ ಹಿಂದೆ ಇವರು ಬಿಜೆಪಿ ಪಕ್ಷದ ಪರ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರು. ಮಾತ್ರವಲ್ಲ, ಇದೇ ವರ್ಷ ಮಾರ್ಚ್ ತಿಂಗಳಲ್ಲಿ ನಡೆದ ಗೋರಕ್ ಪುರ ಉಪ ಚುನಾವಣೆಯಲ್ಲಿ ಮನೆ ಮನೆಗೆ ತೆರಳಿ ಪ್ರಧಾನಿ ಮೋದಿ ಪರ ಬಾರಿ ಪ್ರಚಾರ ನಡೆಸಿದ್ದರು.
ಆದರೆ, ಇದೀಗ ಅಭಿನಂದನ್ ಪಾಠಕ್ ಬಿಜೆಪಿ ಆಡಳಿತದಿಂದ ಬೇಸತ್ತಿದ್ದು, 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಪ್ರಚಾರ ನಡೆಸಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ.
ಬಿಜೆಪಿ ಸರಕಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಆಡಳಿತದಿಂದ ಜನ ರೋಸಿ ಹೋಗಿದ್ದು, ಯಾವಾಗ ಅಚ್ಚೇ ದಿನ್ (ಒಳ್ಳೆಯ ದಿನ) ಬರುತ್ತದೆ ಎಂದು ಜನರು ಕೇಳುತ್ತಿದ್ದಾರೆ. ಮಾತ್ರವಲ್ಲ, ಅಭಿನಂದನ್ ಪಾಠಕ್ ಈಗಾಗಲೇ ಉತ್ತರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ರಾಜ್ ಬಬ್ಬರ್ ಅವರನ್ನು ಭೇಟಿ ಮಾಡಿದ್ದು, ಅವರು ಸೋನಿಯಾ ಗಾಂಧಿ ಜೊತೆಗೆ ಮಾತುಕತೆ ನಡೆಸಲು ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ್ದಾರೆ ಎಂದು ಹೇಳಿದ್ದಾರೆ.
ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಬಗ್ಗೆಯೂ ಅಭಿನಂದನ್ ಪಾಠಕ್ ಮಾತನಾಡಿದ್ದು, ತಮಗೆ ಮೋದಿ ಬಗ್ಗೆ ಅಸಮಾಧಾನವಿಲ್ಲ. ಮೋದಿ ವಿಶ್ವದಾದ್ಯಂತ ದೇಶಕ್ಕೆ ಉತ್ತಮ ವರ್ಚಸ್ಸು ತಂದುಕೊಟ್ಟಿದ್ದಾರೆ. ಆದರೆ, ಪಕ್ಷದ ಕಾರ್ಯನಿರ್ವಹಣೆಗೆ ತಮ್ಮ ವಿರೋಧವಿದೆ. ಮನ್ ಕೀ ಬಾತ್ ಬಗ್ಗೆ ಪ್ರಚಾರ ಮಾಡುವ ಬಿಜೆಪಿ ಸಾಮಾನ್ಯ ಜನರ ಹೃದಯದಲ್ಲಿ ಏನು ಇದೆ ಎಂದು ಕೇಳುವುದಿಲ್ಲ ಎಂದು ಹೇಳಿದ್ದಾರೆ.