ನವದೆಹಲಿ, ಅ05(SS): ಕೆಲ ದಿನಗಳ ಹಿಂದೆಯಷ್ಟೇ ತಾಯಿಯ ಅಂತ್ಯಸಂಸ್ಕಾರಕ್ಕೆ ಆಗಮಿಸದೆ ಯುಎಸ್ಗೆ ತೆರಳಿದ್ದ ರಿಷಿ ಕಪೂರ್ ಅವರಿಗೆ ಕ್ಯಾನ್ಸರ್ ಇದೆ. ಹಾಗಾಗಿ ಚಿಕಿತ್ಸೆಗಾಗಿ ಹೋಗಿದ್ದಾರೆ ಎಂದು ಎಲ್ಲೆಡೆ ಹರಡಿದ್ದ ಗಾಳಿ ಸುದ್ದಿಗೆ ಅವರ ಸೋದರ ರಣಧೀರ್ ಕಪೂರ್ ತೆರೆ ಎಳೆದಿದ್ದಾರೆ.
ರಿಷಿ ಕಪೂರ್ಗೆ ಕ್ಯಾನ್ಸರ್ ಇದೆ ಎನ್ನುವುದು ರೂಮರ್. ಅವರ ಆರೋಗ್ಯದಲ್ಲಿ ಏರುಪೇರಾಗಿದೆ. ನಾಳೆ ಯುಎಸ್ನಲ್ಲಿ ವೈದ್ಯಕೀಯ ಪರೀಕ್ಷೆ ನಡೆಯಲಿದೆ. ರಿಷಿ ತಮ್ಮ ಆರೋಗ್ಯದ ಬಗ್ಗೆ ನಮ್ಮೊಂದಿಗೆ ಚರ್ಚಿಸಿದ್ದಾರೆ ಎಂದು ರಣಧೀರ್ ಕಪೂರ್ ತಿಳಿಸಿದ್ದಾರೆ.
ರಿಷಿ ಕಪೂರ್ ತಾಯಿ ಅ.1ರಂದು ಹೃದಯಾಘಾತದಿಂದ ಮೃತಪಟ್ಟಿದ್ದರು. ಆದರೆ ಅವರ ಸಾವಿಗೂ ಎರಡು ದಿನದ ಮೊದಲು ಸೆ.29ರಂದು ರಿಷಿ ತಮ್ಮ ಪತ್ನಿ ನೀತು ಹಾಗೂ ಮಗ ರಣಬೀರ್ ಜತೆ ಯುಎಸ್ಗೆ ತೆರಳಿದ್ದರು. ಈ ಬಗ್ಗೆ ಟ್ವೀಟ್ ಮಾಡಿದ್ದ ರಿಷಿ, ನಾನು ನಮ್ಮ ಕೆಲಸಗಳಿಂದ ಸ್ವಲ್ಪ ದಿನ ಬಿಡುವು ತೆಗೆದುಕೊಳ್ಳುತ್ತಿದ್ದೇನೆ. ಆರೋಗ್ಯದಲ್ಲಿ ಸಮಸ್ಯೆಯುಂಟಾಗಿದ್ದು ಚಿಕಿತ್ಸೆಗಾಗಿ ಅಮೆರಿಕಾಗೆ ಹೋಗುತ್ತಿದ್ದೇನೆ. 45 ವರ್ಷಗಳ ಕಾಲ ಸಿನಿಮಾ ಕ್ಷೇತ್ರದ ಏಳುಬೀಳುಗಳು ನನ್ನ ಜತೆಯಿವೆ. ಅಭಿಮಾನಿಗಳು ನನ್ನ ಆರೋಗ್ಯದ ಬಗೆಗಿನ ಅನಗತ್ಯ ರೂಮರ್ಗಳಿಂದ ದುಃಖಿತರಾಗಬೇಡಿ. ನಿಮ್ಮ ಹಾರೈಕೆ, ಪ್ರೀತಿಯಿಂದ ಬಹುಬೇಗ ವಾಪಸ್ ಬರುತ್ತೇನೆ ಎಂದಿದ್ದರು.
ಬಳಿಕ ತಾಯಿಯ ಅಂತ್ಯಸಂಸ್ಕಾರಕ್ಕೆ ರಿಷಿ, ನೀತು, ರಣಬೀರ್ ಗೈರಾಗಿದ್ದರು. ಈ ಬೆನ್ನಲ್ಲೇ ರಿಷಿ ಕಪೂರ್ಗೆ ಕ್ಯಾನ್ಸರ್ ಇದೆ ಎಂಬ ವದಂತಿ ಹರಡಿತ್ತು. ಮಾತ್ರವಲ್ಲ, ಎಲ್ಲೆಡೆ ಈ ಸುದ್ದಿ ಭಾರೀ ಚರ್ಚೆಗೆ ಕಾರಣವಾಗಿತ್ತು.