ಬಂಟ್ವಾಳ, ಅ05(SS): ಬಂಟ್ವಾಳ ಪರಿಸರದಲ್ಲಿ ಭಾರೀ ಮಳೆಯೊಂದಿಗೆ ಸುರಿದ ಗುಡುಗು, ಮಿಂಚಿಗೆ ಹೆದರಿ ಅಸ್ವಸ್ಥಗೊಂಡ ನಾಲ್ವರು ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ದಾಖಲಿಸಿದ ಘಟನೆ ನಡೆದಿದೆ.
ಬಂಟ್ವಾಳ ತಾಲೂಕಿನ ವಗ್ಗ ಕಾಲೇಜಿನ ವಿದ್ಯಾರ್ಥಿನಿಯರಾದ, ನಾವೂರು ಗ್ರಾಮದ ಪಟ್ಲ ಮನೆ ನಿವಾಸಿ ಅನ್ನತ್ ಬಾನು , ಉಳಿ ಗ್ರಾಮದ ತುಂಬೆದಡ್ಕ ನಿವಾಸಿ ಸಾಹಿರಾ ಸಿಡಿಲು ಬಡಿದು ಗಾಯಗೊಂಡವರು.
ಅನ್ನತ್ ಬಾನು ಮತ್ತು ಸಾಹಿರಾ ಸಂಜೆ ಶಾಲೆಯಿಂದ ಮನೆಗೆ ಮರಳುವಾಗ ವಗ್ಗದ ನಿರ್ಕಾನ ಬಸ್ ನಿಲ್ದಾಣದಲ್ಲಿ ನಿಂತಿದ್ದ ಸಂದರ್ಭದಲ್ಲಿ ಸಿಡಿಲು ಬಡಿದಿದೆ. ತದನಂತರ ಗುಡುಗಿನ ಅಬ್ಬರಕ್ಕೆ ಬೆಚ್ಚಿದ್ದು, ಇವರಿಬ್ಬರ ಕೈ-ಕಾಲುಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ವಿದ್ಯಾರ್ಥಿನಿಗಳಿಬ್ಬರನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಅದೇ ರೀತಿ ದೇವಸ್ಯಪಡೂರು ಗ್ರಾಮದ ನಿವಾಸಿಗಳಾದ ಐಸಮ್ಮ ಹಾಗೂ ಆಸ್ಯಮ್ಮ ಅವರು ಮನೆಯಲ್ಲಿದ್ದಾಗ ಸಿಡಿಲಬ್ಬರಕ್ಕೆ ಅಸ್ವಸ್ಥಗೊಂಡಿದ್ದು, ಅವರನ್ನು ಕೂಡಾ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಸದ್ಯ ಸಿಡಿಲಬ್ಬರಕ್ಕೆ ಹೆದರಿ, ಸಣ್ಣಪುಟ್ಟ ಗಾಯಗಳೊಂದಿಗೆ ನಾಲ್ವರು ವಿದ್ಯಾರ್ಥಿಗಳು ಇಲ್ಲಿನ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ತಹಶೀಲ್ದಾರ್ ಅವರು ತಿಳಿಸಿದ್ದಾರೆ.