ಮಂಗಳೂರು, ಅ 4(SM): ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಅಕ್ಟೋಬರ್ 4ರ ಗುರುವಾರದಂದು ಭಾರೀ ಮಳೆ ಸುರಿದಿದೆ. ಸಂಜೆಯಾಗುತ್ತಲೇ ದಟ್ಟ ಕಾರ್ಮೋಡಗಳು ಮೇಳೈಸಿ, ಮಿಂಚು ಗುಡುಗು ಸಹಿತ ಭಾರೀ ಮಳೆಯಾಗಿದೆ.
ಭಾರೀ ಗಾಳಿ ಮಳೆಯ ಪರಿಣಾಮ, ಅಲ್ಲಲ್ಲಿ ವಿದ್ಯುತ್ ಕೈಕೊಟ್ಟಿತ್ತು. ನಗರದಾದ್ಯಂತ ಭಾರೀ ಮಳೆಯಿಂದಾಗಿ ರಸ್ತೆಗಳಲ್ಲಿ ನೀರು ತುಂಬಿಕೊಂಡ ಪರಿಣಾಮ ದ್ವಿಚಕ್ರ ವಾಹನ ಸವಾರರು ಹಾಗೂ ಪಾದಚಾರಿಗಳು ಕಂಗೆಟ್ಟರು. ಸಂಜೆ 5 ಗಂಟೆಯಾಗುತ್ತಿದ್ದಂತೆ ಕಾರ್ಮೋಡದಿಂದಾಗಿ ನಗರದಲ್ಲಿ ಕತ್ತಲಾವರಿಸಿತ್ತು. ವಾಹನಗಳು ಹೆಡ್ ಲೈಟ್ ಉರಿಸಿ ಸಂಚರಿಸುತ್ತಿರುವ ದೃಶ್ಯಗಳು ಇಂದು ಸಂಜೆ ನಗರದಲ್ಲಿ ಕಂಡು ಬಂತು. ನಗರದ ರಸ್ತೆಗಳೂ ಕೃತಕ ನೆರೆನೀರಿನಿಂದ ಆವೃತ್ತವಾಗಿದ್ದವು.
ಕರಾವಳಿಯಾದ್ಯಂತ ಮುಂದಿನ ಐದು ದಿನಗಳ ಕಾಲ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಮೀನುಗಾರರಿಗೂ ಸಮುದ್ರಕ್ಕೆ ಇಳಿಯದಂತೆ ಮುನ್ನೆಚ್ಚರಿಕೆ ನೀಡಲಾಗಿದೆ. ಪ್ರಕ್ಷುಬ್ಧ ಹವಾಮಾನದ ಹಿನ್ನೆಲೆಯಲ್ಲಿ ಮೀನುಗಾರಿಕೆಗೆ ತೆರಳಿದ್ದ ಸುಮಾರು 300ಕ್ಕೂ ಅಧಿಕ ಬೋಟುಗಳು ದಡಕ್ಕೆ ವಾಪಾಸ್ ಬಂದಿವೆ ಎಂದು ಮೀನುಗಾರರು ಹೇಳಿದ್ದಾರೆ.