ಬಂಟ್ವಾಳ, ಅ 4(SM): ಬಿ.ಸಿ.ರೋಡಿನ ಬ್ರಹ್ಮರಕೂಟ್ಲು ಟೋಲ್ ಗೇಟ್ ನಲ್ಲಿ ಪ್ರಯಾಣಿಕೆಯೋರ್ವರ ಮೇಲೆ ಟೋಲ್ ಸಿಬ್ಬಂದಿ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಈ ವೇಳೆ ಗಾಯಗೊಂಡ ಮಹಿಳೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ವಳಚ್ಚಿಲ್ ನಿವಾಸಿ ತಾಝಿಯಾ ಗಾಯಗೊಂಡ ಮಹಿಳೆ. ತಾಝಿಯಾ ಅವರು ವಳಚ್ಚಿಲ್ ಕಡೆಗೆ ಕಾರಿನಲ್ಲಿ ಪ್ರಯಾಣಿಸುವ ವೇಳೆ ಬ್ರಹ್ಮರಕೂಟ್ಲು ಟೋಲ್ ಗೇಟ್ ನಲ್ಲಿ ಟೋಲ್ ನೀಡದೆ ಮುಂದೆ ತೆರಳಿದ್ದಾರೆ. ಈ ಕಾರಣಕ್ಕಾಗಿ ಟೋಲ್ ಸಿಬ್ಬಂದಿ ಇವರು ಪ್ರಯಾಣಿಸುತ್ತಿದ್ದ ಟಾಟಾ ಇಂಡಿಕಾ ಕಾರಿನ ಮುಂಭಾಗದ ಗ್ಲಾಸಿಗೆ ಗುದ್ದಿದ ಪರಿಣಾಮ ಕಾಡಿನ ಗ್ಲಾಸು ಒಡೆದು ಕಾರಿನಲ್ಲಿ ಕುಳಿತು ಕೊಂಡಿದ್ದ ತಾಝಿಯಾ ಅವರ ಕಣ್ಣಿಗೆ ಗಾಜು ತಾಗಿ ಗಾಯಗಳಾಗಿವೆ.
ಟೋಲ್ ಗೇಟ್ ಯಾವ ರೀತಿಯಲ್ಲಿ ಇರಬೇಕು ಎಂಬ ನಿಯಮ ಇಲ್ಲಿಗೆ ಅನ್ವಯಿಸಿದಂತಿಲ್ಲ. ಸರ್ವೀಸ್ ರಸ್ತೆ ದುರಸ್ತಿ ಮಾಡಿಲ್ಲ. ಬಸ್ ನಿಲ್ದಾಣಗಳಿಲ್ಲ. ಅಲ್ಲದೆ, ಟೋಲ್ ಗೇಟ್ ನಲ್ಲಿರಬೇಕಾದ ನಾಲ್ಕು ಲೇನ್ ಗಳು ಇಲ್ಲ. ಒಟ್ಟಾರೆ ಇಲ್ಲಿ ಮೂಲಭೂತವಾದ ಸೌಕರ್ಯಗಳು ಯಾವುದು ಇಲ್ಲ.
ಕಳೆದವಾರ ಕೂಡಾ ಇದೇ ರೀತಿ ವಾಹನ ಚಾಲಕನೋರ್ವನಿಗೆ ಅವಾಚ್ಯ ಶಬ್ದಗಳಿಂದ ಬೈದು ಆತನ ಮೇಲೆ ಹಲ್ಲೆ ನಡೆಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೂ, ಇವರ ಮೇಲೆ ಪೋಲೀಸರು ಕ್ರಮಕೈಕೊಂಡಿಲ್ಲ ಎನ್ನುವ ದೂರುಗಳು ಕೇಳಿಬರುತ್ತಿದೆ. ಘಟನೆ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.