ನವದೆಹಲಿ, ಅ 04 (MSP) : ಗಗನಕ್ಕೇರಿದ ಪೆಟ್ರೋಲ್ ಬೆಲೆಯನ್ನು ಕಡಿಮೆ ಮಾಡಲು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಚಿಂತಿಸಿದ್ದು, ಕೊನೆಗೂ ಅ.4 ರ ಗುರುವಾರದಂದು ಪ್ರತಿ ಲೀಟರ್ ಪೆಟ್ರೋಲ್, ಡಿಸೇಲ್ ಮೇಲಿನ ಅಬಕಾರಿ ಸುಂಕವನ್ನು 2.50 ರೂ. ಕಡಿತಗೊಳಿಸಿದ್ದು ಕೇಂದ್ರ ಸರ್ಕಾರ ಇದೀಗ ರಾಜ್ಯ ಸರ್ಕಾರಗಳಿಗೆ ಮೌಲ್ಯವರ್ಧಿತ ತೆರಿಗೆ ಕಡಿತಗೊಳಿಸುವಂತೆ ಹೇಳಿದೆ.
ಕಳೆದ ಹಲವು ತಿಂಗಳಿಂದ ನಾಗಾಲೋಟದಲ್ಲಿ ಸಾಗುತ್ತಿದ್ದ ತೈಲ ಬೆಲೆ ಇಳಿಕೆಗೆ ಅಬಕಾರಿ ಸುಂಕದಲ್ಲಿ ಕೇಂದ್ರ ಸರ್ಕಾರವೂ 1.5 ರೂಪಾಯಿ ಕಡಿತ ಮಾಡಿದ್ದು ಈಗ ರಾಜ್ಯಗಳೂ 2.50 ರಷ್ಟು ಕಡಿತಗೊಳಿಸಿ ಎಂದು ಹೇಳಿ ಜಾಣತನ ಮೆರೆದಿದೆ.
ದೆಹಲಿಯಲ್ಲಿ ಅರುಣ್ ಜೇಟ್ಲಿ ಪತ್ರಿಕಾಗೋಷ್ಟಿ ನಡೆಸಿದ್ದು , ಕೇಂದ್ರ ಅಬಕಾರಿ ಸುಂಕದ ಕಡಿತದಿಂದ ಪ್ರತಿ ಲೀಟರ್ ಗೆ ಪೆಟ್ರೋಲ್, ಡೀಸೆಲ್ 2.50 ರೂಪಾಯಿ ಇಳಿಕೆಯಾಗಲಿದೆ ಎಂದಿದ್ದಾರೆ. ಈ ಬೆಲೆ ಇಳಿಕೆಯಿಂದ ಸರ್ಕಾರಕ್ಕೆ 25 ಸಾವಿರ ಕೋಟಿ ಹೆಚ್ಚುವರಿಯಾಗಿ ಹೊಣೆಯಾಗಲಿದ್ದು, ರಾಜ್ಯಗಳು 2.50 ರಷ್ಟು ವ್ಯಾಟ್ ಇಳಿಕೆ ಮಾಡಿದ್ರೆ, ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ 5ರೂಪಾಯಿ ಇಳಿಕೆಯಾಗಲಿದೆ ಎಂದು ತಿಳಿಸಿದ್ದಾರೆ. ಪೆಟ್ರೋಲ್ ಹಾಗೂ ಡೀಸೆಲ್ ಮೂಲಕ ಆದಾಯ ಸಂಗ್ರಹ ಮಾಡುವ ರಾಜ್ಯಗಳ ಪೈಕಿ ಕರ್ನಾಟಕಕ್ಕೆ ದೇಶದಲ್ಲೇ ಐದನೇ ಸ್ಥಾನವಿದೆ. ದೇಶದಲ್ಲೇ ಅತಿ ಹೆಚ್ಚು ತೆರಿಗೆ ವಿಧಿಸೋ ಮಹಾರಾಷ್ಟ್ರ ಸರ್ಕಾರ ಆದಾಯ ಸಂಗ್ರಹದಲ್ಲಿ ಮೊದಲ ಸ್ಥಾನವಿದೆ.