ಕೇರಳ, 04 ಅ (MSP): ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ದರ್ಶನ ಬಯಸಿ ಹೋಗುವ ಮಹಿಳೆಗೆ ಎಲ್ಲಾ ರೀತಿಯಲ್ಲೂ ಎಲ್ಲಾ ರೀತಿಯ ಭದ್ರತೆಯನ್ನು ನೀಡಲಾಗುತ್ತದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ. ಸುಪ್ರೀಂ ಕೋರ್ಟ್ ತೀರ್ಪಿನಂತೆ ಶಬರಿಮಲೆಗೆ ಹೋಗಲು ಇಚ್ಚಿಸುವ ಮಹಿಳೆಯನ್ನು ತಡೆಯಲು ಸಾಧ್ಯವಿಲ್ಲ . ನ್ಯಾಯಾಲಯದ ನಿರ್ದೇಶನದಂತೆ ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಎಲ್ಲಾ ವಯಸ್ಸಿನ ಮಹಿಳೆಯರಿಗೆ ಪ್ರವೇಶ ನೀಡಬೇಕು. ಹೀಗಾಗಿ ಮಹಿಳೆಯರು ದೇಗುಲ ಭೇಟಿಯ ಇಚ್ಚೆ ವ್ಯಕ್ತಪಡಿಸಿದರೆ ಅವರಿಗೆ ಅಗತ್ಯವಿರುವ ರಕ್ಷಣೆ ನೀಡಲು ನಾವು ಸದಾ ಸಿದ್ದ ಎಂದು ಸ್ಪಷ್ಟಪಡಿಸಿದ್ದಾರೆ.
ಕೇರಳದಲ್ಲಿ ಮಂಗಳವಾರ, ತೀರ್ಪಿನ ವಿರುದ್ದ ಸರ್ಕಾರ ಮೇಲ್ಮನವಿ ಸಲ್ಲಿಸಬೇಕೆಂದು ಒತ್ತಾಯಿಸಿ 4 ಸಾವಿರಕ್ಕೂ ಅಧಿಕ ಮಂದಿ ಮೆರವಣಿಗೆ ನಡೆಸಿದ್ದರು. ಈ ಹಿನ್ನಲೆಯಲ್ಲಿ ಮಾತನಾಡಿದ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೇರಳ ಸರ್ಕಾರ, ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ನ್ಯಾಯಾಲಯವೂ ಎಲ್ಲಾ ಅಂಶಗಳನ್ನು ಚೆನ್ನಾಗಿ ಪರಿಶೀಲಿಸಿ ಈ ತೀರ್ಪು ನೀಡಿದೆ. ದೇಶದ ಪ್ರಜೆಗಳು ಕಾನೂನಿಗೆ ಗೌರವ ನೀಡಬೇಕು. ಮಹಿಳೆಯರು ಶಬರಿಮಲೆಗೆ ಹೋಗುವುದನ್ನು ತಡೆಯುವ ಹಕ್ಕು ಯಾರಿಗೂ ಇಲ್ಲ ಎಂದು ಇದೇ ವೇಳೆ ತಿಳಿಸಿದ್ದಾರೆ.
ಸರ್ಕಾರಕ್ಕೆ ಪೂರಕವಾಗಿ ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಕೂಡಾ ತೀರ್ಪಿನ ವಿರುದ್ದವಾಗಿ ಮೇಲ್ಮನವಿ ಸಲ್ಲಿಕೆ ಮಾಡದೇ ಇರಲು ನಿರ್ಧರಿಸಿದೆ. ಟಿಡಿಬಿ ಸಭೆಯ ಬಳಿಕ ಮಾತನಾಡಿದ ಮಂಡಳಿ ಅಧ್ಯಕ್ಷ ಎ.ಪದ್ಮಕುಮಾರ್, ನಾವು ಪುನರ್ ಪರಿಶೀಲನಾ ಅರ್ಜಿ ಸಲ್ಲಿಸುವುದಿಲ್ಲ, ಶಬರಿಮಲೆ, ಪಂಪಾ ಕ್ಷೇತ್ರದಲ್ಲಿ ಮಹಿಳೆಯರಿಗೆ ಬೇಕಾದ ಎಲ್ಲಾ ಸೌಲಭ್ಯ ಕಲ್ಪಿಸಲು ಸಭೆಯಲ್ಲಿ ಚರ್ಚಿಸಲಾಗಿದೆ ಎಂದರು.