ಮಂಗಳೂರು,ಜೂ.5(DaijiworldNews/HR): ಪರಿಸರ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕರ ಹೊಣೆಯಾಗಿದೆ, ಪ್ರತಿಯೊಬ್ಬರು ಪರಿಸರ ಕಾಳಜಿ ಇಟ್ಟುಕೊಂಡು ತಮ್ಮ ಸುತ್ತಲೂ ಅವಕಾಶವಿರುವ ಕಡೆ ಗಿಡ ನೆಡುವ ಮೂಲಕ ಹಸಿರು ಬೆಳೆಸುವ ಕೆಲಸ ಮಾಡಬೇಕು, ಆಮೂಲಕ ನಮ್ಮ ಸುತ್ತಲ ಪರಿಸರದಲ್ಲಿ ಪ್ರಾಕೃತಿಕವಾಗಿ ಶುದ್ಧ ಆಮ್ಲಜನಕ ಉತ್ಪಾದನೆ ಮಾಡಲು ಮುಂದಾಗಬೇಕೆಂದು ಅರಣ್ಯ ,ಕನ್ನಡ ಮತ್ತು ಸಂಸ್ಕಂತಿ ಸಚಿವ ಅರವಿಂದ ಲಿಂಬಾವಳಿ ಕರೆ ನೀಡಿದ್ದಾರೆ.
ಇಂದು ಧರ್ಮಸ್ಥಳದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಉಪಸ್ಥಿತಿಯಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಆಯೋಜಿಸಲಾಗಿದ್ದ 'ಕಾಡಿನಲ್ಲಿ ವನ್ಯಮೃಗ ಗಳಿಗಾಗಿ ಹಣ್ಣಿನ ಮರಗಳನ್ನು ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ್ದಾರೆ.
ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮೀಣಾಭಿವೃದ್ಧಿ ಸಂಸ್ಥೆ ಮತ್ತು ಕರ್ನಾಟಕ ಸರ್ಕಾರದ ಅರಣ್ಯ ಇಲಾಖೆ ಜಂಟಿ ಸಹಭಾಗಿತ್ವದಲ್ಲಿ ಧರ್ಮಸ್ಥಳದ 125 ಹೆಕ್ಟೇರು ಪ್ರದೇಶದಲ್ಲಿ ಈ ಯೋಜನೆ ಅನುಮೋದನೆಗೊಳ್ಳುತ್ತಿದೆ.
ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಇಂದು ಈ ಕಾರ್ಯಕ್ರಮಕ್ಕೆ ಅರಣ್ಯ ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಅವರೊಂದಿಗೆ ಚಾಲನೆ ನೀಡಿದರು.
ಕಾರ್ಯಕ್ರಮದ ಆರಂಭದಲ್ಲಿ ಪರಿಸರ ಸಂರಕ್ಷಣೆ ಮಾಡುವ ಬಗ್ಗೆ ಎಲ್ಲರೂ ಪ್ರತಿಜ್ಞಾವಿಧಿ ಸ್ವೀಕರಿಸಿದರು. ಪರಿಸರ ಸಂರಕ್ಷಣೆ ನಮ್ಮ ಹೊಣೆ ಎಂಬ ದ್ಯೇಯ ವಾಕ್ಯಕ್ಕೆ ದನಿಗೂಡಿಸಿದರು.
ಆನಂತರ ವೃಕ್ಷ ಬಂಧನ ವಿಧಿ ನಡೆಸಲಾಯಿತು. ಆ ಮೂಲಕ ಮರಗಳ ಸಂರಕ್ಷಣೆಯ ಬಗ್ಗೆ ಪ್ರತಿಯೊಬ್ಬರು ಬದ್ಧತೆಯಿಂದ ದುಡಿಯುವ, ವೃಕ್ಷ ಕಾಯುವ ಕಾಯಕಕ್ಕೆ ಕೈಜೋಡಿಸಲು ಅನುವು ಮಾಡಿಕೊಡಲಾಯಿತು.
ಸಮಾರಂಭದಲ್ಲಿ ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜಾ, ವಿಧಾನಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಧರ್ಮಸ್ಥಳ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಜಯ ಮೋನಪ್ಪ ಗೌಡ,ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸಂಜಯ್ ಮೋಹನ್, ಮಂಗಳೂರು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಾಶ್ ನಟಾಲ್ಕರ್ಮತ್ತು ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಕರಿಕಾಳನ್ ಉಪಸ್ಥಿತರಿದ್ದರು.