ಮಂಗಳೂರು, ಅ 4(SM): ಫೇಸ್ಬುಕ್ನಲ್ಲಿ ಮಹಿಳೆಯ ಹೆಸರಿನಲ್ಲಿ ಪರಿಚಯ ಮಾಡಿಕೊಂಡು ಫೋಟೊ ಪಡೆದು ಬ್ಲಾಕ್ಮೇಲ್ ಮಾಡಿ ಹಣ ಸುಲಿಗೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಉರ್ವ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು ಯಶವಂತಪುರ ಬಳಿಯ ಸುಭೇದಾರ ಪಾಳ್ಯದ ತ್ರಿವೇಣಿ ಕ್ರಾಸ್ ನಿವಾಸಿ ಆದಿತ್ಯ ಯಾನೆ ಅಶ್ವಿನಿ(19) ಹಾಗೂ ಕನಕಪುರ ಬಸವೇಶ್ವರ ನಗರ ಹಳೇ ಸೈಂಟ್ ಮೈಕಲ್ ಶಾಲೆ ಸಮೀಪದ ನಿವಾಸಿ ಅರುಣ್ ಎಚ್.ಎಸ್.(27) ಎಂಬವರನ್ನು ಬೆಂಗಳೂರಿನಲ್ಲಿ ಬಂಧಿಸಿ ಮಂಗಳೂರಿಗೆ ಕರೆ ತಂದಿದ್ದಾರೆ. ಬೆಂಗಳೂರು ಮೂಲದ ಆರಾಧ್ಯ ಎಂಬ ಮಹಿಳೆಯ ಹೆಸರಿನಲ್ಲಿ ಸಾಮಾಜಿಕ ಜಾಲತಾಣವಾದ ಫೇಸ್ಬುಕ್ನಲ್ಲಿ ಆರೋಪಿಗಳು ಬಳಸುತ್ತಿದ್ದರು. ಹಾಗೂ ಇದರ ಮೂಲಕ ಮಂಗಳೂರಿನ ವ್ಯಕ್ತಿಯೊಬ್ಬರನ್ನು ಪರಿಚಯ ಮಾಡಿಕೊಂಡಿದ್ದರು. ಬ್ಲ್ಯಾಕ್ ಮೇಲ್ ಮಾಡಿ 65 ಸಾವಿರ ರೂಪಾಯಿಗಳನ್ನು ಬೆಂಗಳೂರಿನ ಯಶವಂತಪುರದಲ್ಲಿ ಪಡೆದುಕೊಂಡಿದ್ದರು.
ಬಳಿಕ ಪದೇ ಪದೇ ಫೋನ್ ಮಾಡಿ ಹೆಚ್ಚಿನ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಈ ಬಗ್ಗೆ ಕಾರ್ಯಾಚರಣೆ ನಡೆಸಿದ ಉರ್ವ ಪೊಲೀಸರು ಬೆಂಗಳೂರಿನ ಕೊಲಂಬಿಯಾ ಆಸ್ಪತ್ರೆ ಬಳಿ ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಕರಣದ ಮುಖ್ಯ ಆರೋಪಿ ಆರಾಧ್ಯ ಎಂಬ ಹೆಸರಿನಲ್ಲಿ ಪರಿಚಯ ಮಾಡಿಕೊಂಡಿದ್ದಾಕೆ ಪುರುಷ ವ್ಯಕ್ತಿ ಎಂಬುದು ದಸ್ತಗಿರಿ ಸಂದರ್ಭ ತಿಳಿದು ಬಂದಿದೆ. ಆರೋಪಿ ಮಹಿಳೆಯ ವೇಷ ಧರಿಸಿ ದೂರುದಾರರನ್ನು ನಂಬಿಸಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಸದ್ಯ ಪ್ರಕರಣದ ಕುರಿತಂತೆ ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಮುನ್ನಡೆಸಿದ್ದಾರೆ.