ಕಾಸರಗೋಡು, ಅ 3(SM): ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣ ಬದಿಯಡ್ಕ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಜಾಮೀನು ಕೋರಿ ಮಹಿಳೆ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದೆ. ಈ ಹಿನ್ನೆಲೆ ಆರೋಪಿ ಕಾಸರಗೋಡು ಡಿವೈಎಸ್ಪಿ ಕಚೇರಿಯಲ್ಲಿ ಶರಣಾಗಿದ್ದಾಳೆ. ಬದಿಯಡ್ಕದ ಝುಹರಾಬಿ(೩೮) ಆರೋಪಿಯಾಗಿದ್ದು, ಈಕೆಯ ವಿರುದ್ಧ ಪೋಕ್ಸೋ ಕಾಯ್ದೆಯಂತೆ ಪ್ರಕರಣ ದಾಖಲಾಗಿದೆ.
ಈಕೆಯನ್ನು ಬಂಧಿಸಿ ಬುಧವಾರ ಸಂಜೆ ಕಾಸರಗೋಡು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಇನ್ನು ಪ್ರಕರಣದಲ್ಲಿ ಈಕೆಯ ಪತಿ ಅಬೂಬಕ್ಕರ್ ಎರಡನೇ ಆರೋಪಿಯಾಗಿದ್ದು, ಈತ ವಿದೇಶಲ್ಲಿದ್ದಾನೆ. ಝುಹರಾಬಿ ಮನೆಯಲ್ಲಿ ಕೆಲಸಕ್ಕಿದ್ದ ಹದಿನಾಲ್ಕು ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು ಎನ್ನಲಾಗಿದೆ. ಮೂರು ವರ್ಷಗಳಿಂದ ಕೆಲಸಕ್ಕಿದ್ದ ಬಾಲಕಿ ಸಮೀಪದ ಶಾಲೆಗೆ ತೆರಳುತ್ತಿದ್ದಳು. ಕೆಲ ತಿಂಗಳ ಹಿಂದೆ ಅಸ್ವಸ್ಥಗೊಂಡ ಹಿನ್ನೆಲೆ ಶಾಲಾ ಅಧಿಕಾರಿಗಳು ಬಾಲಕಿಯಲ್ಲಿ ವಿಚಾರಿಸಿದಾಗ ಕಿರುಕುಳ ಬೆಳಕಿಗೆ ಬಂದಿತ್ತು. ಬಳಿಕ ಶಾಲಾ ಅಧಿಕಾರಿಗಳು ಚೈಲ್ಡ್ ಲೈನ್ ಗೆ ದೂರು ನೀಡಿದ್ದರು. ಬಾಲಕಿಯಿಂದ ಮಾಹಿತಿ ಪಡೆದ ಅಧಿಕಾರಿಗಳು ಪೊಲೀಸರಿಗೆ ದೂರು ನೀಡಿದ್ದರು.
2015 ರಲ್ಲಿ ಆರೋಪಿ ಅಬೂಬಕ್ಕರ್ ನೀಲಿ ಚಿತ್ರ ತೋರಿಸಿ ಲೈಂಗಿಕ ಕಿರುಕುಳ ನೀಡಲೆತ್ನಿಸಿರುವುದಾಗಿ ತನಿಖೆಯಿಂದ ತಿಳಿದುಬಂದಿತ್ತು. ಈ ಹಿನ್ನಲೆಯಲ್ಲಿ ಝುಹರಾಬಿ ಮತ್ತು ಪತಿ ಅಬೂಬಕ್ಕರ್ ವಿರುದ್ಧ ಪೋಕ್ಸೋ ಕಾಯ್ದೆಯಂತೆ ಬದಿಯಡ್ಕ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಈ ಹಿನ್ನೆಲೆ ಇಬ್ಬರು ಕೂಡ ತಲೆ ಮರೆಸಿಕೊಂಡು ಜಾಮೀನು ಕೋರಿ ಹೈಕೋರ್ಟ್ ಮೊರೆ ಹೋಗಿದ್ದರು. ಅಬೂಬಕ್ಕರ್ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಝುಹರಾಬಿ ವಿರುದ್ಧ ಕೃತ್ಯಕ್ಕೆ ಒತ್ತಾಸೆ ನೀಡಿದ ಪ್ರಕರಣ ದಾಖಲಿಸಲಾಗಿದೆ.
ಗಲ್ಫ್ ನಲ್ಲಿರುವ ಎರಡನೇ ಆರೋಪಿ ಅಬೂಬಕ್ಕರ್ ನನ್ನು ಊರಿಗೆ ತಲಪಿಸುವ ಪ್ರಯತ್ನದಲ್ಲಿರುವ ಪೊಲೀಸರು ಈಗಾಗಲೇ ಲುಕ್ ಔಟ್ ನೋಟಿಸ್ ಬಿಡುಗಡೆ ಗೊಳಿಸಿದ್ದಾರೆ.