ಮಂಗಳೂರು,ಅ 03 (MSP): ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಮಂಗಳೂರು ಪ್ರೆಸ್ಕ್ಲಬ್ ಹಾಗೂ ಪತ್ರಿಕಾ ಭವನ ಟ್ರಸ್ಟ್ ಆಶ್ರಯದಲ್ಲಿ ಅಡ್ಯಾರ್ ಸಹ್ಯಾದ್ರಿ ಕಾಲೇಜು ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಬ್ರ್ಯಾಂಡ್ ಮಂಗಳೂರು ಫ್ರೆಂಡ್ಶಿಪ್ ಕ್ರಿಕೆಟ್ ಟೂರ್ನಿಯ ಫೈನಲ್ನಲ್ಲಿ ಡಿಸಿ ಇಲೆವೆನ್ ತಂಡವನ್ನು ಸೋಲಿಸುವ ಮೂಲಕ ನಗರ ಪೊಲೀಸ್ ತಂಡ ಪ್ರಶಸ್ತಿ ಗೆದ್ದುಕೊಂಡಿತು.
ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ನಗರ ಪೊಲೀಸ್ ತಂಡ ಫೀಲ್ಡಿಂಗ್ ಆಯ್ದುಕೊಂಡಿತು. ಬ್ಯಾಟಿಂಗ್ ಇಳಿದ ಡಿಸಿ ಇಲೆವೆನ್ ತಂಡ 5 ಓವರ್ನಲ್ಲಿ 9 ವಿಕೆಟ್ಗಳನ್ನು ಕಳೆದುಕೊಂಡು 26ರನ್ ಗಳಿಸುವಲ್ಲಿ ಯಶಸ್ವಿಯಾಯಿತು. ಇದಕ್ಕುತ್ತರವಾಗಿ ಬ್ಯಾಟಿಂಗ್ಗಿಳಿದ ನಗರ ಪೊಲೀಸರು 3 ಓವರ್ನಲ್ಲಿ 3 ವಿಕೆಟ್ ಕಳೆದುಕೊಂಡು 27ರನ್ ಗಳಿಸುವ ಮೂಲಕ ವಿಜಯ ಸಾಧಿಸಿದರು. ಈ ಮೂಲಕ ಮಂಗಳೂರು ನಗರ ಪೊಲೀಸ್ ವಿನ್ನರ್ ಪ್ರಶಸ್ತಿ ತನ್ನದಾಗಿಸಿಕೊಂಡರೆ, ಜಿಲ್ಲಾಧಿಕಾರಿ ತಂಡ ರನ್ನರ್ ಪ್ರಶಸ್ತಿ ಗಳಿಸಿಕೊಂಡಿತು.
ವೈಯಕ್ತಿಕ ಪ್ರಶಸ್ತಿ: ಫೈನಲ್ನಲ್ಲಿ ಉತ್ತಮ ಪ್ರದರ್ಶನ ನೀಡಿದ ಪತ್ರಕರ್ತರ ತಂಡದ ಧೀರಜ್ ಬೆಸ್ಟ್ ಬ್ಯಾಟ್ಸ್ಮನ್, ಡಿಸಿ ಇಲೆವೆನ್ನ ಕರುಣಾಕರ್ ಬೆಸ್ಟ್ ಬೌಲರ್, ಸಿಟಿ ಪೊಲೀಸ್ ತಂಡದ ರಂಜನ್ ಮ್ಯಾನ್ ಆಫ್ದಿ ಮ್ಯಾಚ್, ಸಿಟಿ ಪೊಲೀಸ್ ತಂಡ ರೋಹಿತ್ ಮ್ಯಾನ್ ಆಫ್ ದಿ ಸೀರಿಸ್ ಪ್ರಶಸ್ತಿ ತಮ್ಮದಾಗಿಸಿಕೊಂಡರು. ಅತೀ ಹೆಚ್ಚು ಸಿಕ್ಸರ್ ಬಾರಿಸಿದ ಧೀರಜ್ ಅವರಿಗೆ ಹಾಗೂ ಅತೀ ಹೆಚ್ಚು ವಿಕೆಟ್ ಪಡೆದ ರಂಜನ್ ಅವರಿಗೆ ಸುದ್ದಿ ಬಿಡುಗಡೆ ವತಿಯಿಂದ ವಿಶೇಷ ಬಹುಮಾನ ನೀಡಲಾಯಿತು.
6 ತಂಡಗಳ ಮುಖಾಮುಖಿ: ಪಂದ್ಯಾಟದಲ್ಲಿ ಮಂಗಳೂರು ನಗರ ಪೊಲೀಸ್, ದ.ಕ. ಜಿಲ್ಲಾ ಎಸ್ಪಿ ತಂಡ, ನಗರ ಪತ್ರಕರ್ತರ ತಂಡ, ಗ್ರಾಮೀಣ ಪತ್ರಕರ್ತರ ತಂಡ, ಸಹ್ಯಾದ್ರಿ ಪ್ರೆಸಿಡೆಂಟ್ ಇಲೆವೆನ್, ಡಿಸಿ ಇಲೆವನ್ ತಂಡಗಳ ಮಧ್ಯೆ ಸ್ಪರ್ಧೆ ನಡೆಯಿತು. ಎ ಮತ್ತು ಬಿ ವಿಭಾಗದಲ್ಲಿ ಲೀಗ್ ಪಂದ್ಯಾಟ ನಡೆದು ಉತ್ತಮ ಪ್ರದರ್ಶನ ನೀಡಿದ ಸಿಟಿ ಪೊಲೀಸ್ ಮತ್ತು ನಗರ ಪತ್ರಕರ್ತರ ತಂಡ ಫೈನಲ್ಗೇರಿತ್ತು.
ಪ್ರಶಸ್ತಿ ವಿತರಣಾ ಕಾರ್ಯಕ್ರಮದಲ್ಲಿ ಮಂಗಳೂರು ನಗರ ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್, ಮಂಗಳೂರು ನಗರ ಉಪ ಪೊಲೀಸ್ ಆಯುಕ್ತೆ ಉಮಾಪ್ರಶಾಂತ್, ಸಹ್ಯಾದ್ರಿ ಅಧ್ಯಕ್ಷ ಮಂಜುನಾಥ ಭಂಡಾರಿ, ದ.ಕ. ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ಇಂದಾಜೆ, ಮಾಜಿ ಅಂತಾರಾಷ್ಟ್ರೀಯ ಅಥ್ಲೀಟ್ ಸುನೀಲ್ ಶೆಟ್ಟಿ, ದ.ಕ. ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ಇಂದಾಜೆ ಉಪಸ್ಥಿತರಿದ್ದು, ವಿಜೇತರಿಗೆ ಅಭಿನಂದನೆ ಸಲ್ಲಿಸಿದರು. ಈ ಸಂದರ್ಭ ಮೊದಲ ಪ್ರಶಸ್ತಿ ಪಡೆದ ನಗರ ಪೊಲೀಸ್ ತಂಡಕ್ಕೆ ಪೊಲೀಸ್ ಕಮಿಷನರ್ ಅವರು 10ಸಾವಿರ ರೂ. ವಿಶೇಷ ಬಹುಮಾನ ಘೋಷಣೆ ಮಾಡಿದರು.
ಸಾಂಕೇತಿಕ ಉದ್ಘಾಟನೆ: ಕಾರ್ಯಕ್ರಮವನ್ನು ಬೆಳಗ್ಗೆ ಮಂಗಳೂರು ನಗರ ಪೊಲೀಸ್ ಉಪ ಪೊಲೀಸ್ ಆಯುಕ್ತರಾದ ಉಮಾಪ್ರಶಾಂತ್ ಮತ್ತು ದ.ಕ. ಜಿಲ್ಲಾ ಎಎಸ್ಪಿ ಸಜಿತ್ ಅವರು ಉದ್ಘಾಟಿಸಿದರು. ಈ ಸಂದರ್ಭ ಸಹ್ಯಾದ್ರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮಂಜುನಾಥ ಭಂಡಾರಿ, ಎಡಿಷನ್ ಎಸ್ಪಿ ಋಷಿಕೇಶ್ ಸೋನಾವಣೆ, ದ.ಕ. ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ಇಂದಾಜೆ, ಉಪಾಧ್ಯಕ್ಷ ದಯಾನಂದ್ ಕುಕ್ಕಾಜೆ, ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ, ಪ್ರೆಸ್ಕ್ಲಬ್ ಅಧ್ಯಕ್ಷ ಅನ್ನು ಮಂಗಳೂರು ಉಪಸ್ಥಿತರಿದ್ದರು.