ಉಡುಪಿ, ಅ 03 (MSP): ರಾಜ್ಯ ಸರ್ಕಾರದ ಜಲಸಂಪನ್ಮೂಲ ಸಚಿವ, ಪ್ರಭಾವಿ ಮಂತ್ರಿ ಎಂದೇ ಖ್ಯಾತಿ ಪಡೆದ ಡಿ ಕೆ ಶಿವಕುಮಾರ್ ಕುಟುಂಬ ಸಮೇತರಾಗಿ ಅ.02 ರ ಮಂಗಳವಾರ ಕೊಲ್ಲೂರು ಮೂಕಾಂಬಿಕಾ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ವಿಶೇಷವೆಂದರೆ ಡಿಕೆಶಿ ಕೊಲ್ಲೂರಿಗೆ ಭೇಟಿ ಕೊಡುತ್ತಿರುವುದು ಒಂದೇ ವರ್ಷದಲ್ಲಿ ಇದು ಮೂರನೇ ಬಾರಿಗೆ.
ಕೊಲ್ಲೂರು ಶ್ರೀ ಮೂಕಾಂಬಿಕೆಯ ಭಕ್ತರಾಗಿರುವ ಸಚಿವ ಡಿ.ಕೆ. ಶಿವಕುಮಾರ್, ಪತ್ನಿ ಉಷಾ ಶಿವಕುಮಾರ್, ಮಗಳು ಐಶ್ವರ್ಯ ಜೊತೆ ಆಗಮಿಸಿದ ಅವರು ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಭಕ್ತಿ ಪರವಶರಾಗಿದ್ದ ಶಿವಕುಮಾರ್ ಪೂಜೆಯ ವೇಳೆಯಲ್ಲಿ ತಮಗೆ ಬಂದ ಸಂಕಷ್ಟಗಳೆಲ್ಲ ದೂರವಾಗಿಲಿ ಎಂದು ಪ್ರಧಾನ ಅರ್ಚಕರಲ್ಲಿ ದೇವಿಗೆ ಆರತಿ ಮಾಡಿಸಿದ್ದಾರೆ.
ಮಂಗಳವಾರದಂದು ಮಧ್ಯಾಹ್ನದ ವೇಳೆಗೆ ಪತ್ನಿ ಹಾಗೂ ಪುತ್ರಿ ಐಶ್ವರ್ಯ ಜೊತೆ ಕೊಲ್ಲೂರಿಗೆ ಆಗಮಿಸಿದ ಅವರು ಭಕ್ತಿಪೂರ್ವಕವಾಗಿ ದೇವಿಗೆ ಶರಣಾದಂತೆ ಕಂಡು ಬಂತು. ದೇವಾಲಯದಕ್ಕೆ ಹೊರತುಪಡಿಸಿ ಇನ್ನಿತರ ಮಂದಿಗೆ ಕೂಡ ಡಿಕೆಶಿ ಆಗಮನದ ಪೂರ್ವ ಮಾಹಿತಿ ಇರಲಿಲ್ಲ. ಅಲ್ಲದೆ ಮಾಧ್ಯಮಕ್ಕೂ ಕೂಡ ಯಾವುದೇ ಮಾಹಿತಿ ನೀಡಿರಲಿಲ್ಲ.
ಮೂಕಾಂಬಿಕೆಯ ದರ್ಶನದ ಬಳಿಕ ದೇವಸ್ಥಾನದ ಪ್ರಾಂಗಣದಲ್ಲಿದ್ದ ಎಲ್ಲಾ ಗುಡಿಗಳ ಬಳಿಗೆ ತೆರಳಿದ ಅವರು ವೀರಭದ್ರ, ದೇವಿ, ಗಣಪತಿ ಗುಡಿಗಳಿಗೆ ಅರ್ಚನೆ ಸಲ್ಲಿಸಿದರು. ನಂತರ ಬೈಂದೂರು ತಾಲೂಕಿನ ವರಾಹಿ ನೀರಾವರಿ ಯೋಜನೆ ಬಗ್ಗೆ ಅಧಿಕಾರಿಗಳ ಜೊತೆ ಸಭೆಗೆ ತೆರಳಿದರು.