ಮಂಗಳೂರು,ಅ 03 (MSP): ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮಂಗಳೂರು-ಉಡುಪಿ ಮಧ್ಯೆ ಸಂಪರ್ಕ ಕೊಂಡಿಯಾಗಿರುವ ಅಪಾಯದಂಚಿನಲ್ಲಿರುವ ಕೂಳೂರು ಹಳೇ ಸೇತುವೆ ಇನ್ಮುಂದೆ ವಾಹನ ಸಂಚಾರಕ್ಕೆ ಬಂದ್ ಆಗಲಿದೆ. ಸ್ವಾತಂತ್ರ್ಯ ಪೂರ್ವದಿಂದಲೇ ಇದ್ದ ಈ ಸೇತುವೆ ಇದೀಗ ಶಿಥಿಲಾವಸ್ಥೆ ತಲುಪಿದ್ದು, ಬ್ರಿಡ್ಜ್ ಅಪಾಯದ ಅಂಚಿನಲ್ಲಿದೆ ಎಂದು ರಾಷ್ಟ್ರೀಯ ಹೆದ್ದಾರಿಯ ಇಂಜಿನಿಯರ್ ವಿಭಾಗವೂ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಿದ್ದಾರೆ. ಈ ಹಿನ್ನಲೆಯನ್ನು ಇನ್ನು ಕೆಲವೇ ದಿನಗಳಲ್ಲಿ ಜಿಲ್ಲಾಡಳಿತ ಈ ಸೇತುವೆಯಲ್ಲಿ ಸಂಚಾರ ನಿಷೇಧಿಸಿ ಆದೇಶ ಹೊರಡಿಸಲಿದೆ.
ಕೂಳೂರಿನಲ್ಲಿ ಎರಡು ಸೇತುವೆಗಳಿದ್ದು ಇವೆರಡನ್ನು ಏಕಮುಖ ಸಂಚಾರಕ್ಕೆ ಬಳಸಿಕೊಳ್ಳಲಾಗುತ್ತಿದೆ. ಸದ್ಯದ ಮಟ್ಟಿಗೆ ಕೂಳೂರಿನಲ್ಲಿರುವ ಒಂದು ಸೇತುವೆಯಲ್ಲಿ ಸಂಚಾರ ನಿರ್ಬಂಧಗೊಳಿಸಿ ಮತ್ತೊಂದು ಸೇತುವೆಯಲ್ಲಿ ದ್ವಿಮುಖ ಸಂಚಾರಕ್ಕೆ ಅನುವು ಮಾಡಿ ಜಿಲ್ಲಾಡಳಿತ ಅದೇಶ ಹೊರಡಿಸಲಿದೆ. ಹೀಗಾಗಿ ಹೊಸ ಸೇತುವೆಯ ನಿರ್ಮಾಣವಾಗುವರೆಗೆ ಈ ಸೇತುವೆಯಲ್ಲಿ ವಾಹನ ದಟ್ಟಣೆ ಹೆಚ್ಚಾಗುವ ಸಾಧ್ಯತೆ ಇದೆ.
ಕೂಳೂರು ಸೇತುವೆಯಲ್ಲಿ ಘನ ವಾಹನಗಳ ಓಡಾಟ ಹೆಚ್ಚಾಗಿದ್ದು, ಕೇರಳದ ಕಡೆಯಿಂದ ಉತ್ತರ ಭಾರತ ಸಂಪರ್ಕಿಸುವ ಹೆದ್ದಾರಿ ಇದಾಗಿದೆ. ಹೀಗಾಗಿ ಕೈಗಾರಿಕೆಗಳಿಗೆ ಸಂಬಂಧಪಟ್ಟ ವಾಹನಗಳು ಹೆಚ್ಚಾಗಿ ಓಡಾಡುತ್ತದೆ. ಇದೀಗ ವರದಿ ಪ್ರಕಾರ ಧಿಡೀರ್ ನಿಷೇಧ ಆದೇಶ ಹೊರಡಿಸಿರುವುದರಿಂದ ಈ ಭಾಗದ ಜನರು ತೊಂದರೆಗೆ ಒಳಗಾಗಲಿದ್ದಾರೆ. ಹೀಗಾಗಿ ಸರ್ಕಾರ ತಕ್ಷಣ ಹೊಸ ಸೇತುವೆ ನಿರ್ಮಾಣಕ್ಕಾಗಿ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.