ಕಾಸರಗೋಡು, ಜೂ. 02 (DaijiworldNews/SM): ಜಿಲ್ಲೆಯಲ್ಲಿ ಕೋವಿಡ್ ಹಿನ್ನೆಲೆಯಲ್ಲಿ ಜಾರಿಗೊಳಿಸಲಾದ ಲಾಕ್ ಡೌನ್ ನಲ್ಲಿ ಅಲ್ಪ ಸಡಿಲಿಕೆ ಜಾರಿ ಮಾಡಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಸಜಿತ್ ಬಾಬು ಆದೇಶ ಹೊರಡಿಸಿದ್ದಾರೆ.
ಏನೆಲ್ಲ ವಿನಾಯಿತಿ? ಇಲ್ಲಿದೆ ಸಂಪೂರ್ಣ ವಿವರ:
ಹಣ್ಣು, ತರಕಾರಿ, ಸರಕು, ಹಾಲು, ಹಾಲು ಉತ್ಪನ್ನಗಳ ಅಂಗಡಿಗಳನ್ನು, ಹೋಟೆಲ್ ಗಳನ್ನು, ಬೇಕರಿಗಳನ್ನು, ಮೀನು-ಮಾಂಸ ಸಹಕಾರಿ ಸಂಘಗಳನ್ನು ಬೆಳಗ್ಗೆ 7 ರಿಂದ ಸಂಜೆ 7.30 ವರೆಗೆ ತೆರೆಯಬಹುದು. ಹೋಟೆಲ್ ಮತ್ತು ಬೇಕರಿಗಳಲ್ಲಿ ಪಾರ್ಸೆಲ್ ಗೆ ಮಾತ್ರ ಅವಕಾಶ.
ಬಟ್ಟೆ, ಬಂಗಾರದ ಅಂಗಡಿಗಳು(ಆನ್ ಲೈನ್ ವ್ಯಾಪಾರ ಮತ್ತು ಹೋಂ ಡೆಲಿವರಿ ಮಾತ್ರ) ಬೆಳಗ್ಗೆ 9 ರಿಂದ ಸಂಜೆ 5 ಗಂಟೆ ವರೆಗೆ ತೆರೆಯಬಹುದು. ವಿವಾಹ ಸಂಬಂಧಿ ಖರೀದಿಗೆ ಬರುವ ಮಂದಿ ಆಮಂತ್ರಣ ಪತ್ರಿಕೆಯೊಂದಿಗೆ ಪ್ರಯಾಣಿಸಬೇಕು.
ಶಿಕ್ಷಣಕ್ಕೆ ಸಂಬಂಧಿಸಿದ ಪರಿಕರಗಳನ್ನು ಮಾರಾಟ ಮಾಡುವ ಅಂಗಡಿಗಳು ಸೋಮವಾರ, ಬುಧವಾರ ಹಾಗೂ ಶುಕ್ರವಾರದಂದು ಸಂಜೆ 5 ಗಂಟೆ ವರೆಗೆ ಮಾತ್ರ ತೆರೆಯಬಹುದು.
ಬ್ಯಾಂಕ್ ಗಳು ಸೋಮವಾರ, ಬುಧವಾರ ಹಾಗೂ ಶುಕ್ರವಾರದಂದು ಸಂಜೆ 5 ಗಂಟೆವರೆಗೆ ಚಟುವಟಿಕೆ ನಡೆಸಬಹುದು.
ಎಲ್ಲ ಉದ್ದಿಮೆ ಕೇಂದ್ರಗಳು, ಅಗತ್ಯ ಸಿಬ್ಬಂದಿಗಳೊಂದಿಗೆ ಕಾರ್ಯಾಚರಿಸಬಹುದು.(ಹುರಿಹಗ್ಗ, ಗೇರುಬೀಜ, ಮುದ್ರಣ ಸಹಿತ, ಶೇ 50 ಮೀರದಂತೆ)
ಉದ್ದಿಮೆ ಸಂಸ್ಥೆಗಳ ಅಗತ್ಯಕ್ಕೆ ಕಚ್ಚಾ ಸಾಮಾಗ್ರಿಗಳು ಇತ್ಯಾದಿ(ಪ್ಯಾಕೇಜಿಂಗ್ ಸಹಿತ) ನೀಡುವ ಸಂಸ್ಥೆಗಳು, ಅಂಗಡಿಗಳು ಮಂಗಳವಾರ, ಗುರುವಾರ ಹಾಗೂ ಶನಿವಾರದಂದು ಸಂಜೆ 5 ಗಂಟೆ ವರೆಗೆ ಚಟುವಟಿಕೆ ನಡೆಸಬಹುದು.
ವರ್ಕ್ ಶಾಪ್ ಗಳು, ಟಯರ್ ರೀಸಾಲಿಂಗ್-ಪಂಚರ್ ಸರ್ವೀಸ್, ವಾಹನ ಶೋ ರೂಂಗಳ ಸಂಬಂಧ ವರ್ಕ್ ಶಾಪ್ ಗಳು, ಕಟ್ಟಡ ನಿರ್ಮಾಣ ಸಂಬಂಧ ಮರದ ಹಲಗೆಗಳ ವರ್ಕ್ ಶಾಪ್ ಗಳು ಶನಿವಾರ, ಭಾನುವಾರದಂದು ಬೆಳಗ್ಗೆ 9 ರಿಂದ ಸಂಜೆ 7.30 ವರೆಗೆ ತೆರೆದು ಕಾರ್ಯಾಚರಿಸಬಹುದು.
ನೇತ್ರ ತಪಾಸಣೆ ಕೇಂದ್ರಗಳು, ಕನ್ನಡಕ, ಶ್ರವಣ ಯಂತ್ರ ಮಾರಾಟ ಕೇಂದ್ರಗಳು, ದುರಸ್ತಿ ಸಂಸ್ಥೆಗಳು, ಅಡುಗೆ ಅನಿಲ ಒಲೆ ದುರಸ್ತಿ ಕೇಂದ್ರಗಳು, ಮೊಬೈಲ್, ಕಂಪ್ಯೂಟರ್ ದುರಸ್ತಿ ಅಂಗಡಿಗಳು ಮಂಗಳವಾರ, ಶನಿವಾರದಂದು ತೆರೆಯಬಹುದು.
ಆಟೋಮೊಬೈಲ್ ಬಿಡಿಭಾಗಗಳ ಅಂಗಡಿಗಳು ಸೋಮವಾರ ಹಾಗೂ ಗುರುವಾರದಂದು ತೆರೆಯಬಹುದು.
ಕಟ್ಟಡ ನಿರ್ಮಾಣ ಚಟುವಟಿಕೆಗಳ ಅಗತ್ಯದ ಸಾಮಾಗ್ರಿ, ಪೈಂಟಿಂಗ್, ಇಲೆಕ್ಟ್ರಿಕಲ್, ಪ್ಲಂಬಿಂಗ್ ಉತ್ಪನ್ನಗಳು, ಇತರ ಸಾಮಾಗ್ರಿಗಳ ಅಂಗಡಿಗಳು ಬೆಳಗ್ಗೆ 11ರಿಂದ ಸಂಜೆ 6 ಗಂಟೆ ವರೆಗೆ ತೆರೆದು ಕಾರ್ಯಾಚರಿಸಬಹುದು.
ಪಡಿತರ ಅಂಗಡಿಗಳು ಸೋಮವಾರದಿಂದ ಶನಿವಾರದವರೆಗೆ ಬೆಳಗ್ಗೆ 8.30ರಿಂದ ಮಧ್ಯಾಹ್ನ 2.30 ವರೆಗೆ ತೆರೆದು ಕಾರ್ಯಾಚರಿಸಬಹುದು.
ಕಗ್ಗಲ್ಲು, ಕೆಂಪುಕಲ್ಲು ಕೆತ್ತುವ ಸಾಮಾಗ್ರಿಗಳ ಮಾರಾಟ ಕೇಂದ್ರಗಳನ್ನು ತೆರೆಯಲು ಅನುಮತಿಯಿದೆ.
ರಬ್ಬರ್ ಮರಗಳಿಗೆ ರೈನ್ ಗಾರ್ಡ್ ಅಳವಡಿಸುವ ಸಾಮಾಗ್ರಿಗಳ ಮಾರಾಟ ಅಂಗಡಿಗಳು ತೆರೆಯಬಹುದು.
ಕಾಡುತ್ಪತ್ತಿ ವ್ಯಾಪಾರ ಅಂಗಡಿಗಳು ಕಾಸರಗೋಡು ಜಿಲ್ಲೆಯಲ್ಲಿ ಮಂಗಳವಾರ ತೆರೆದು ಕಾರ್ಯಾಚರಿಸಬಹುದು.
ಕ್ರಷರ್ ಗಳು, ಪಶು ಆಹಾರ, ಕೋಳಿ ತಿನಿಸು ಮಾರಾಟ ಅಂಗಡಿಗಳು ಸೋಮವಾರದಿಂದ ಶನಿವಾರದವರೆಗೆ ಬೆಳಗ್ಗೆ 7 ರಿಂದ ಸಂಜೆ 7.30 ವರೆಗೆ ತೆರೆಯಬಹುದು.
ಕೋವಿಡ್ ಕಟ್ಟುನಿಟ್ಟುಗಳನ್ನು ಕಡ್ಡಾಯವಾಗಿ ಪಾಲಿಸಿ ಸಾರ್ವಜನಿಕ ಪ್ರದೇಶಗಳಲ್ಲಿ ವ್ಯಾಯಾಮ ನಡೆಸಬಹುದು. ಬೆಳಗ್ಗೆ 5 ರಿಂದ 7 ಗಂಟೆ ವರೆಗೆ, ಸಂಜೆ 7 ರಿಂದ ರಾತ್ರಿ 9 ಗಂಟೆ ವರೆಗೆ ವ್ಯಾಯಾಮ ನಡೆಸಲು ಅನುಮತಿಯಿದೆ.
ಗುಜರಿ ದಾಸ್ತಾನು ಇರಿಸಿದ ಜಾಗದಲ್ಲಿ ಅವನ್ನು ವರ್ಗಾಯಿಸಲು ವಾರದಲ್ಲಿ 2 ದಿನ ಅನುಮತಿಯಿದೆ.
ಶೇಂದಿ ಅಂಗಡಿಗಳಲ್ಲಿ ಶೇಂದಿ ಪಾರ್ಸೆಲ್ ನೀಡಲು ಅನುಮತಿ ನೀಡಲಾಗಿದ್ದು, ಕೋವಿಡ್ ಮಾನದಂಡಗಳನ್ನು ಕಡ್ಡಾಯವಾಗಿ ಪಾಲಿಸಬೇಕು.