ಉಳ್ಳಾಲ,ಅ07: ಮುಕ್ಕಚ್ಚೇರಿ ಮಸೀದಿ ಎದುರುಗಡೆ ಜುಬೈರ್ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದ ನಾಲ್ವರು ಆರೋಪಿಗಳನ್ನು ತಲಶ್ಶೇರಿ ಪೊಲೀಸರು ಅಲ್ಲಿನ ಲಾಡ್ಜೊಂದರಿಂದ ವಶಕ್ಕೆ ಪಡೆದುಕೊಂಡಿದ್ದಾರೆಂದು ತಿಳಿದುಬಂದಿದೆ. ಉಳ್ಳಾಲ ನಿವಾಸಿ ಸುಹೈಲ್, ತಾಜುದ್ದೀನ್, ಮುಸ್ತಾಫ ಮತ್ತು ನಿಝಾಂ ಎಂಬವರನ್ನು ಪೊಲೀಸರು ಸಂಶಯಾಸ್ಪದವಾಗಿ ವಶಕ್ಕೆ ಪಡೆದುಕೊಂಡಿದ್ದಾರೆನ್ನಲಾಗಿದೆ. ಮಂಗಳೂರು ಕಡೆಯಿಂದ ಎರ್ನಾಕುಳಂ ಕಡೆಗೆ ತೆರಳುವ ಮಾರ್ಗಮಧ್ಯೆ ಆರೋಪಿಗಳು ತಲಶ್ಶೇರಿ ಸಮೀಪ ಲಾಡ್ಜೊಂದರಲ್ಲಿ ತಂಗಿದ್ದರು. ತಲಶ್ಶೇರಿ ಪೊಲೀಸರಿಗೆ ಸ್ಥಳೀಯರಿಂದ ದೊರೆತ ಮಾಹಿತಿಯನ್ವಯ ಲಾಡ್ಜಿಗೆ ದಾಳಿ ನಡೆಸಿ ನಾಲ್ವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಸಂಶಯದ ಮೇರೆಗೆ ನಾಲ್ವರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ತಲಶ್ಶೇರಿ ಸಿ.ಐ ಮಾಧ್ಯಮಕ್ಕೆ ತಿಳಿಸಿದ್ದಾರೆ. ಈ ಬಗ್ಗೆ ಮಂಗಳೂರು ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಅವರ ಬಂದ ಬಳಿಕವಷ್ಟೇ ವಿಚಾರಣೆಗೆ ಪಡೆದುಕೊಳ್ಳಲಾಗುವುದಾಗಿಯೂ ಹೇಳಿದ್ದಾರೆ.
ಹೊರರಾಜ್ಯಕ್ಕೆ ವಿಶೇಷ ಪೊಲೀಸ್ ತಂಡ.
ಝುಬೈರ್ ಹತ್ಯೆಗೆ ಸಂಬಂಧಿಸಿದಂತೆ ತನಿಖೆಯನ್ನು ಚುರುಕುಗೊಳಿಸಿರುವ ಪೊಲೀಸರು ಆರೋಪಿಗಳ ಪತ್ತೆಗಾಗಿ ಮೂರು ತಂಡಗಳನ್ನು ರಚಿಸಿದ್ದು, ಬೆಂಗಳೂರು ಸೇರಿದಂತೆ ಹೊರ ರಾಜ್ಯಗಳಲ್ಲೂ ಶೋಧ ಕಾರ್ಯ ಮುಂದುವರೆದಿದೆ. ಮುಕ್ಕಚ್ಚೇರಿ ಮಸೀದಿಯ ಎದುರು ಬುಧವಾರ ಝುಬೈರ್ನನ್ನು ಸುಹೈಲ್ ನೇತೃತ್ವದ ತಂಡ ಕೊಲೆಗೈದು ಪರಾರಿಯಾಗಿತ್ತು. ಆರೋಪಿಗಳ ಮೊಬೈಲ್ ನೆಟ್ವರ್ಕ್ ತೊಕ್ಕೊಟ್ಟುವರೆಗೆ ಸಿಕ್ಕಿದ್ದು, ಬಳಿಕ ಸ್ವಿಚ್ ಆಫ್ ಆಗಿದ್ದು, ಹಂತಕರು ತೆರಳಿದ ಕಾರಿನ ಆಧಾರದಲ್ಲಿ ಬೆಂಗಳೂರಿನಲ್ಲಿ ಅವಿತುಕೊಂಡಿರುವ ಸಾಧ್ಯತೆಗಳು ಹೆಚ್ಚಿದ್ದು, ಪೊಲೀಸರ ತಂಡ ಬೆಂಗಳೂರು ಸೇರಿದಂತೆ ಹೊರ ರಾಜ್ಯಗಳಲ್ಲಿ ತನಿಖೆಯನ್ನು ಮುಂದುವರೆಸಿದೆ