ಕೊಚ್ಚಿ, ಅ 03 (MSP): ಬಿಷಪ್ ಫ್ರಾಂಕೋ ಮುಳಕ್ಕಲ್ ಅವರಿಗೆ ಜಾಮೀನು ನೀಡುವಂತೆ ಅವರ ಪರ ವಕೀಲರು ಸಲ್ಲಿಸಿದ್ದ ಮನವಿ ಅರ್ಜಿಯನ್ನು ಕೇರಳ ಹೈಕೋರ್ಟ್ ಅ.03 ರ ಬುಧವಾರ ತಿರಸ್ಕರಿಸಿದೆ. ಕೇರಳ ಕ್ರೈಸ್ತ ಸನ್ಯಾಸಿನಿ ಮೇಲೆ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿರುವ ಅವರನ್ನು ಕಳೆದ ಸೆ.೨೧ ರಂದು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಕೇರಳದ ಕೆಳ ನ್ಯಾಯಾಲಯ ಫ್ರಾಂಕೋ ಅವರನ್ನು ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿತ್ತು ಅಲ್ಲದೆ ಜಾಮೀನು ನೀಡುವಂತೆ ಫ್ರಾಂಕೋ ಸಲ್ಲಿಸಿದ್ದ ಮನವಿ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿತ್ತು. ಈ ಹಿನ್ನಲೆಯಲ್ಲಿ ಪಾದ್ರಿ ಪರ ವಕೀಲರು ಹೈಕೋರ್ಟ್ ನಲ್ಲಿ ಜಾಮೀನು ನೀಡುವಂತೆ ಮೇಲ್ಮನವಿ ಸಲ್ಲಿಸಿದ್ದರು.
ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ಪ್ರಕರಣದಲ್ಲಿ ಬಿಷಪ್ ಫ್ರಾಂಕೋ ಅವರು ತಪ್ಪಿತಸ್ಥರಂತೆ ಮೇಲ್ಮೋಟಕ್ಕೆ ಕಂಡು ಬರುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟು ಜಾಮೀನು ಅರ್ಜಿಯನ್ನು ತಿರಸ್ಕರಿಸಿತು.
ಭಾರತದಲ್ಲಿ ಅತ್ಯಾಚಾರ ಆರೋಪದ ಮೇಲೆ ಬಂಧಿತರಾಗಿರುವ ಮೊದಲ ಬಿಷಪ್ ಫ್ರಾಂಕೋ ಮುಳಕ್ಕಲ್ ಆಗಿದ್ದು, 2014ರಿಂದ 2016ರ ನಡುವೆ ಕ್ರೈಸ್ತ ಸನ್ಯಾಸಿನಿ ಮೇಲೆ 13 ಬಾರಿ ಅತ್ಯಾಚಾರ ಎಸಗಿರುವ ಆರೋಪ ಫ್ರಾಂಕೋ ಮೇಲಿದೆ.