ಉಡುಪಿ, ಜೂ. 1 (DaijiworldNews/SM): ಜಿಲ್ಲೆಯಲ್ಲಿ ಪ್ರಸುತ ಕೋವಿಡ್ 2 ನೇ ಅಲೆಯು ಕಡಿಮೆಯಾಗುತ್ತಿದ್ದು, ಮುಂದೆ ಕೋವಿಡ್ 3 ನೇ ಅಲೆ ಕಂಡುಬರುವ ಸಾಧ್ಯತೆಗಳ ಹಿನ್ನಲೆಯಲ್ಲಿ ಅದನ್ನು ಎದುರಿಸಲು ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳುವ ಅಗತ್ಯವಿದೆ. ಈ ಬಗ್ಗೆ ಜಿಲ್ಲೆಯ ವೈದ್ಯಕೀಯ ಪರಿಣಿತರ ತಂಡದ ಸದಸ್ಯರು ಸೂಕ್ತ ಯೋಜನೆ ರೂಪಿಸಲು ತಮ್ಮ ಸಲಹೆಗಳನ್ನು ನೀಡುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.
ಅವರು ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಮೆಡಿಕಲ್ ಎಕ್ಸ್ ಪರ್ಟ್ ಸಮಿತಿ ಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೋವಿಡ್ ಮೊದಲನೇ ಅಲೆಯು 60 ವರ್ಷ ಮೇಲ್ಟಟ್ಟವರಲ್ಲಿ ಕಂಡು ಬಂದಿದ್ದು, ಎರಡನೇ ಅಲೆಯು 30 ರಿಂದ 55 ವರ್ಷದ ವಯೋಮಾನದವರಿಗೆ ಹೆಚ್ಚು ಕಂಡುಬಂದಿದೆ. ಪ್ರಸ್ತುತ ಈ ಎಲ್ಲಾ ವಯೋಮಿತಿಯವರಿಗೆ ಲಸಿಕೆ ನೀಡಲಾಗುತ್ತಿದ್ದು, 3ನೇ ಅಲೆಯು 18ಕ್ಕಿಂತ ಕಡಿಮೆ ವಯೋಮಿತಿಯವರಲ್ಲಿ ಕಂಡು ಬರುವ ಸಂಭಾವ್ಯತೆಗಳಿದ್ದು, ಕೋವಿಡ್ ಮೊದಲನೇ ಮತ್ತು 2ನೇ ಅಲೆಯಲ್ಲಿ, ಮಕ್ಕಳಿಗೆ ಸೋಂಕು ಹರಡಿರುವ ಪ್ರಮಾಣ ಶೇ.3ರಷ್ಟು ಮಾತ್ರ ಇದ್ದು, ಮಕ್ಕಳಿಗೆ 3ನೇ ಅಲೆ ಹರಡುವ ಕುರಿತು ಸ್ಪಷ್ಟ ಚಿತ್ರಣ ಇಲ್ಲವಾದರೂ ಸಹ ಈ ಬಗ್ಗೆ ಅಗತ್ಯ ಮುನ್ನೆಚ್ಚರಿಕೆ ವಹಿಸುವುದು ಅಗತ್ಯವೆಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದರು.
3ನೇ ಅಲೆ ಎದುರಿಸಲು ಜಿಲ್ಲೆಯಲ್ಲಿ ಅಗತ್ಯವಿರುವ ಬೆಡ್ ಗಳ ಸಂಖ್ಯೆಯನ್ನು ಈಗಲೇ ಗುರುತಿಸಿಕೊಳ್ಳಬೇಕು, ಸಾಧ್ಯವಾದಲ್ಲಿ ಬೆಡ್ ಗಳ ಸಂಖ್ಯೆಯನ್ನು ಹೆಚ್ಚುಮಾಡಬೇಕು. ಅಗತ್ಯ ವೈದ್ಯಕೀಯ ಮೂಲ ಸೌಕರ್ಯಗಳನ್ನು ಸಿದ್ದವಾಗಿಟ್ಟುಕೊಳ್ಳಬೇಕು. ಅಷ್ಟರಲ್ಲಿ ಮಕ್ಕಳಿಗೆ ಲಸಿಕೆ ದೊರೆತರೆ ಸೋಂಕು ಹರಡುವ ಪ್ರಮಾಣ ಕಡಿಮೆಯಾಗಲಿದೆ ಎಂದು ತಜ್ಞರ ಸಮಿತಿ ಅಭಿಪ್ರಾಯ ವ್ಯಕ್ತಪಡಿಸಿತು.