ನವದೆಹಲಿ, ಅ 03 (MSP): ಸುಪ್ರೀಂಕೋರ್ಟ್ ನ 46 ನೇ ಮುಖ್ಯ ನ್ಯಾಯಮೂರ್ತಿಯಾಗಿ ಹಿರಿಯ ನ್ಯಾಯಮೂರ್ತಿ ರಂಜನ್ ಗೊಗೋಯ್ ಇಂದು (ಅ.02) ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಆಧಾರ್, ಶಬರಿಮಲೆಗೆ ಮಹಿಳೆ ಪ್ರವೇಶ ಮುಂತಾದ ಹಲವು ಐತಿಹಾಸಿಕ ತೀರ್ಪುಗಳನ್ನು ನೀಡಿದ್ದ ಮುಖ್ಯನ್ಯಾಯಮೂರ್ತಿಯಾಗಿದ್ದ ದೀಪಕ್ ಮಿಶ್ರಾ ಅಕ್ಟೋಬರ್ 2 ರಂದು ನಿವೃತ್ತರಾಗಿದ್ದು, ಗೊಗೋಯ್ ಅವರ ಅಧಿಕಾರ ಅವಧಿ 2019 ರ ನವೆಂಬರ್ 18 ಕ್ಕೆ ಕೊನೆಗೊಳ್ಳಲಿದೆ. ಅಸ್ಸಾಂ ಮೂಲದ ಗೊಗೋಯ್ ಹಲವು ಪ್ರಮುಖ ಪ್ರಕರಣಗಳನ್ನು ನಿರ್ವಹಿಸಿದ್ದು, ಈ ಹಿಂದೆ ಜಾಹೀರಾತುಗಳಲ್ಲಿ ರಾಜಕಾರಣಿಗಳನ್ನು ಮನಬಂದಂತೆ ವೈಭವೀಕರಿಸುವುದನ್ನು ಕಡಿವಾಣ ಹಾಕಿದ್ದು ಅವರ ಪ್ರಮುಖ ತೀರ್ಪುಗಳಲ್ಲಿ ಒಂದು. ಈ ಹುದ್ದೆಯನ್ನು ಅಲಂಕರಿಸುತ್ತಿರುವ ಈಶಾನ್ಯ ರಾಜ್ಯಗಳ ಮೊದಲ ವ್ಯಕ್ತಿ ಎಂಬ ಖ್ಯಾತಿಗೆ ಅಸ್ಸಾಂ ನ ಗೊಗೋಯ್ ಪಾತ್ರರಾಗಿದ್ದಾರೆ.
ಆದರೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ವಹಿಸಿಕೊಳ್ಳಲಿರುವ ಇವರು ಜೀವಮಾನದಲ್ಲಿ ಗಳಿಸಿದ ಸಂಪತ್ತು, ಒಬ್ಬ ಸುಪ್ರೀಂ ಕೋರ್ಟ್ ನ ಫೇಮಸ್ ವಕೀಲರ ದಿನದ ಸಂಬಳದಷ್ಟು ಇಲ್ಲ ಎನ್ನುವುದು ಆಶ್ಚರ್ಯಕರ. ಇನ್ನು ಇವರಿಗೆ ಒಂದು ಸ್ವಂತ ಮನೆಯಾಗಲಿ ಅಥವಾ ಸ್ವಂತ ವಾಹನವಾಗಲಿ ಇಲ್ಲ ಎನ್ನುವುದು ಬಹಿರಂಗವಾಗಿದೆ.
ಇನ್ನು ಗೊಗೋಯ್ ಅವರ ಪತ್ನಿ ಬಳಿ ಅಲ್ಪ ಪ್ರಮಾಣದ ಅಭರಣಗಳು ಇದೆಯಾದರೂ ಅದು ಅವರ ವಿವಾಹದ ಸಂದರ್ಭದಲ್ಲಿ ಅವರ ಪೋಷಕರು ಮತ್ತು ಸಂಬಂಧಿಕರು ಉಡುಗೊರೆಯಾಗಿ ನೀಡಿದ ಚಿನ್ನಾಭರಣ. ಈ ಎಲ್ಲಾ ಮಾಹಿತಿ ಹೊರಬಿದ್ದದ್ದು ನ್ಯಾಯಮೂರ್ತಿಗಳ ಆಸ್ತಿ ಘೋಷಣೆಯಿಂದ. ಗೊಗೋಯ್ ಅವರ ಬ್ಯಾಂಕ್ ಬ್ಯಾಲೆನ್ಸ್, ಜೀವಿತಾವಧಿ ಉಳಿತಾಯ ಹಾಗೂ ಅವರ ಇತರ ಎಲ್ಲಾ ಆಸ್ತಿ ಪಾಸ್ತಿಗಳನ್ನು ಲೆಕ್ಕ ಹಾಕಿದರೂ, ದುಬಾರಿ ಫೀಸ್ ತೆಗೆದುಕೊಳ್ಳುವ ಹಿರಿಯ ವಕೀಲರೊಬ್ಬರು ಒಂದು ದಿನದಲ್ಲಿ ಗಳಿಸುವ ದುಡ್ಡಿನಷ್ಟು ಆಗುವುದಿಲ್ಲ. ಕಾರಣ ಜೀವ ವಿಮಾ ನಿಗಮದ ಪಾಲಿಸಿ ಸೇರಿದಂತೆ ನ್ಯಾಯಮೂರ್ತಿ ಗೊಗೋಯ್ ಕುಟುಂಬ ಹೊಂದಿದ ಎಲ್ಲಾ ಸಂಪತ್ತಿನ ಮೌಲ್ಯ ಕೇವಲ 30 ಲಕ್ಷ ರೂಪಾಯಿಗಳಷ್ಟೇ. ಆದರೆ ಸುಪ್ರೀಂಕೋರ್ಟ್ನ ಫೇಮಸ್ ಸೀನಿಯರ್ ಲಾಯರ್ ದಿನಕ್ಕೆ 50 ಲಕ್ಷ ರೂಪಾಯಿ ಆದಾಯ ಗಳಿಸುತ್ತಾರೆ.