ಉಡುಪಿ, ಜೂ 01(DaijiworldNews/MS): ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪದಲ್ಲಿ ತಂದೆ ಹಾಗೂ ಮಗನನ್ನು ಉಡುಪಿ ಮಹಿಳಾ ಪೊಲೀಸರು ಮೇ. 31 ರಂದು ಪೋಕ್ಸೊ ಕಾಯ್ದೆಯಡಿ ಬಂಧಿಸಿದ್ದಾರೆ.
ಬಂಧಿತರನ್ನು ಬಳ್ಳಾರಿ ಮೂಲದ ಶಿವಶಂಕರ್ (58) ಮತ್ತು ಸಚಿನ್ (28) ಎಂದು ಗುರುತಿಸಲಾಗಿದೆ. ಇವರು ಪರ್ಕಳದಲ್ಲಿ 14ರ ಹರೆಯದ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎನ್ನಲಾಗಿದೆ. ಶಿವಶಂಕರ್ ಫುಡ್ ಡೆಲಿವರಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೆ, ಸಚಿನ್ ಮಣಿಪಾಲದಲ್ಲಿರುವ ಕ್ಯಾಂಟೀನ್ ನಲ್ಲಿ ದುಡಿಯುತ್ತಿದ್ದ ಎಂದು ತಿಳಿದುಬಂದಿದೆ.
ಈ ಕುರಿತು ಜಿಲ್ಲಾ ಮಕ್ಕಳ ಸಹಾಯವಾಣಿಗೆ ದೂರು ಬಂದಿದ್ದು ತತ್ಕ್ಷಣ ನೊಂದ ಬಾಲಕಿಗೆ ರಕ್ಷಣೆ ಮತ್ತು ಪುನರ್ವಸತಿ ನೀಡುವ ಮೂಲಕ ಆರೋಪಿಗಳನ್ನು ಬಂಧಿಸಲಾಗಿದೆ. ಕಾರ್ಯಾಚರಣೆಯಲ್ಲಿ ಕಪಿಲಾ ರಕ್ಷಣಾಧಿಕಾರಿ ,ಮಹಿಳಾ ಠಾಣಾ ಸಿಬಂದಿ ಅಶೋಕ್ ಮತ್ತು ಜ್ಯೋತಿ ಪಾಲ್ಗೊಂಡಿದ್ದರು. ಉಡುಪಿ ಮಹಿಳಾ ಠಾಣಾ ಇನ್ಸ್ಪೆಕ್ಟರ್ ಪ್ರಮೋದ್ ಕುಮಾರ್
ಮಾರ್ಗದರ್ಶನದಲ್ಲಿ ಎಸ್ಸೈ ವೈಲೆಟ್ ಫೆಮಿನಾ ದೂರು ದಾಖಲಿಸಿಕೊಂಡಿದ್ದಾರೆ.