ಉಡುಪಿ, ಮೇ 31 (DaijiworldNews/SM): ಜಿಲ್ಲೆಗೆ ಇನ್ನು 2 ರಿಂದ 3 ದಿನದಲ್ಲಿ ಮುಂಗಾರು ಪ್ರವೇಶವಾಗುವ ಸಂಭವವಿದ್ದು, ಮುಂಗಾರು ಮಳೆಯಿಂದ ಸಂಭವಿಸಬಹುದಾದ ವಿಕೋಪ ಪರಿಸ್ಥಿತಿಯನ್ನು ಎದುರಿಸಲು ಎಲ್ಲಾ ಇಲಾಖೆಗಳು ಅಗತ್ಯ ಮುಂಜಾಗ್ರತಾ ಕ್ರಮಗಳೊಂದಿಗೆ ಸಮರ್ಪಕವಾಗಿ ನಿರ್ವಹಿಸಲು ಸನ್ನದ್ಧವಾಗಿರುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ಸೂಚನೆ ನೀಡಿದರು.
ಅವರು ಇಂದು ವೀಡಿಯೋ ಸಂವಾದದ ಮೂಲಕ ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮುಂಗಾರು ಮಳೆಯ ಸಮಯದಲ್ಲಿ ಸಂಭವಿಸಬಹುದಾದ ವಿಪತ್ತುಗಳನ್ನು ಎದುರಿಸಲು ಅಗತ್ಯ ಸೂಚನೆ, ನಿರ್ದೇಶನಗಳನ್ನು ನೀಡಿದರು. ಜಿಲ್ಲೆಯ ಎಲ್ಲಾ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಚರಂಡಿಗಳನ್ನು ಸ್ವಚ್ಛಗೊಳಿಸಿರುವುದರ ಕುರಿತು ಮತ್ತೊಮ್ಮೆ ಪರಿಶೀಲಿಸಿ, ರಾಜಕಾಲುವೆಗಳಲ್ಲಿ ಮಳೆನೀರು ಸರಾಗವಾಗಿ ಹರಿದು ಹೋಗಲು ಅಗತ್ಯವಿರುವ ಕ್ರಮಗಳನ್ನು ತುರ್ತಾಗಿ ಕೈಗೊಳ್ಳಿ. ಚರಂಡಿ ಮತ್ತು ರಾಜ ಕಾಲುವೆಗಳಿಂದ ಮೇಲೆತ್ತಿದ್ದ ಮಣ್ಣನ್ನು ಸೂಕ್ತ ರೀತಿಯಲ್ಲಿ ಬೇರೆಡೆಯಲ್ಲಿ ವಿಲೇವಾರಿ ಮಾಡಿ ಎಂದು ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ್ ವತಿಯಿಂದ ಎಲ್ಲಾ ಗ್ರಾಮಗಳಲ್ಲಿ ಕಾರ್ಯನಿರ್ವಹಿಸಲು ಅಗತ್ಯ ಸಿಬ್ಬಂದಿ ಸಿದ್ಧವಾಗಿಟ್ಟುಕೊಳ್ಳಿ. ತಾಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ನಲ್ಲಿ 24 ಗಂಟೆ ಕಾರ್ಯ ನಿರ್ವಹಿಸುವ ಕಂಟ್ರೋಲ್ ರೂಂ ತೆರೆದು, ಸಾರ್ವಜನಿಕರ ದೂರುಗಳಿಗೆ ತಕ್ಷಣ ಸ್ಪಂದಿಸುವಂತೆ ಹಾಗೂ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಗಳು ಕೇಂದ್ರಸ್ಥಾನದಲ್ಲಿ ಲಭ್ಯವಿರುವಂತೆ ಸೂಚನೆ ನೀಡಿದರು.
ಅರಣ್ಯ ಇಲಾಖೆಯಿಂದ ಮಳೆಯಿಂದಾಗಿ ರಸ್ತೆಗೆ ಅಡ್ಡಲಾಗಿ ಬೀಳುವ ಮರಗಳನ್ನು ಕೂಡಲೇ ತೆರವುಗೊಳಿಸಲು ಅಗತ್ಯವಿರುವ ಎಲ್ಲಾ ಯಂತ್ರೋಪಕರಣಗಳು ಮತ್ತು ಸಿಬ್ಬಂದಿಯನ್ನು ಸನ್ನದ್ಧ ಸ್ಥಿತಿಯಲ್ಲಿ ಇರುವಂತೆ ಸೂಚನೆ ನೀಡಿದ ಜಿಲ್ಲಾಧಿಕಾರಿಗಳು, ಅರೋಗ್ಯ ಇಲಾಖೆ ವತಿಯಿಂದ ಮಲೇರಿಯಾ, ಡೆಂಗ್ಯೂ, ಚಿಕುನ್ ಗುನ್ಯಾ ದಂತಹ ರೋಗಗಳು ಹರಡದಂತೆ ಎಚ್ಚರವಹಿಸಿ. ಈ ಬಗ್ಗೆ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಅಗತ್ಯ ಸೂಚನೆ ನೀಡುವಂತೆ ತಿಳಿಸಿದರು.
ತುರ್ತು ಪರಿಸ್ಥಿತಿಯಲ್ಲಿ ಕಾರ್ಯನಿರ್ವಹಿಸಲು ಅಗತ್ಯ ಸುರಕ್ಷಾ ಉಪಕರಣಗಳೊಂದಿಗೆ ಸನ್ನದ್ಧವಾಗಿರುವಂತೆ ಅಗ್ನಿಶಾಮಕ ಇಲಾಖೆಗೆ ಸೂಚನೆ ನೀಡಿದ ಜಿಲ್ಲಾಧಿಕಾರಿ ಜಿ.ಜಗದೀಶ್, ಗೃಹರಕ್ಷಕ ದಳ ಸಿಬ್ಬಂದಿಗಳು ಸಹ ತುರ್ತು ಸೇವೆಗೆ ಲಭ್ಯವಿರುವಂತೆ ಸೂಚಿಸಿದ ಜಿಲ್ಲಾಧಿಕಾರಿ, ಮೆಸ್ಕಾಂ ಇಲಾಖೆ ವತಿಯಿಂದ ವಿದ್ಯುತ್ ಕಡಿತ ಉಂಟಾದಲ್ಲಿ ಕೂಡಲೇ ಸರಿಪಡಿಸಲು ಕ್ರಮ ಕೈಗೊಳ್ಳಿ. ವಿದ್ಯುತ್ ತಂತಿಗಳು ಜೋತು ಬಿದ್ದಿರುವುದು ಕಂಡು ಬಂದಲ್ಲಿ ಕೂಡಲೇ ಸರಿಪಡಿಸಿ, ವಿದ್ಯುತ್ ತಂತಿಯಿಂದ ಯಾವುದೇ ಜೀವಹಾನಿಯಾಗದಂತೆ ಎಚ್ಚರವಹಿಸಿ ಎಂದು ಸೂಚಿಸಿದರು.
ಜಿಲ್ಲೆಯಲ್ಲಿ ಮೀನುಗಾರಿಕೆಗೆ ಮೇ 31 ಕೊನೆಯ ದಿನಾಂಕವಾಗಿದ್ದು, ನಿಗದಿತ ದಿನಾಂಕದ ನಂತರ ಬಂದರಿನಲ್ಲಿ ಮೀನುಗಾರಿಕೆ ನಡೆಸಿದಲ್ಲಿ ಸಂಬಂದಪಟ್ಟವರ ವಿರುದ್ಧ ಎಪಿಡೆಮಿಕ್ ಕಾಯಿದೆ ಹಾಗೂ ಮೀನುಗಾರಿಕಾ ಆದೇಶ ಉಲ್ಲಂಘನೆ ಅಡಿ ಪ್ರಕರಣ ದಾಖಲಿಸುವಂತೆ ಮೀನುಗಾರಿಕಾ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ ಜಿಲ್ಲಾಧಿಕಾರಿ, ಈ ಬಗ್ಗೆ ಪರಿಶೀಲನೆ ನಡೆಸುವಂತೆ ತಹಶೀಲ್ದಾರ್ಗಳಿಗೆ ಸೂಚನೆ ನೀಡಿದರು.