ಬೆಳ್ತಂಗಡಿ, ಅ 02 (MSP): ಬೆಳ್ತಂಗಡಿಯಲ್ಲಿ ರಾಜಕೀಯ ಶತ್ರುಗಳೆಂದೇ ಬಿಂಬಿಸಲ್ಪಟ್ಟ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಸ್ಥಾಪಕಾಧ್ಯಕ್ಷ ಮಹೇಶ್ ಶೆಟ್ಟಿ ತಿಮರೋಡಿ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಇವರಿಬ್ಬರು ಮುಖಾಮುಖಿಯಾದ ಘಟನೆ ಮತ್ತು ಶಾಸಕರ ನಿರ್ಗಮನದ ನಂತರ ಅವರ ವಿರುದ್ದ ತಿಮರೋಡಿ ಕಿಡಿಕಾರಿದ ಘಟನೆ ಬೆಳ್ತಂಗಡಿಯಲ್ಲಿ ಅ.02 ರ ಮಂಗಳವಾರ ನಡೆದಿದೆ.
ತಿಮರೋಡಿ ಬೆಂಬಲಿಗರ ರಾಜ ಕೇಸರಿ ಸಂಘಟನೆಯಿಂದ ಬೆಳ್ತಂಗಡಿಯಲ್ಲಿರುವ ಸರ್ಕಾರಿ ಆಸ್ಪತ್ರೆಯ ಅವರಣವನ್ನು ಸ್ವಚ್ಚಗೊಳಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ಸಂಘಟನೆಯ ವತಿಯಿಂದ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಸ್ಥಾಪಕಾಧ್ಯಕ್ಷ ಮಹೇಶ್ ಶೆಟ್ಟಿ ತಿಮರೋಡಿ ಆಹ್ವಾನ ನೀಡಲಾಗಿತ್ತು. ಬೆಳಿಗ್ಗೆ 9.30 ಕ್ಕೆ ನಿಗದಿಯಾದ ಕಾರ್ಯಕ್ರಮಕ್ಕೆ ತಿಮರೋಡಿ ಹಾಜರಾದರೂ, ಅಲ್ಲಿ ಆಸ್ಪತ್ರೆಯ ವೈದ್ಯಾಧಿಕಾರಿ ಹಾಜರಿರಲಿಲ್ಲ. ಎಷ್ಟೊತ್ತಾದರೂ ವೈದ್ಯರು ಆಗಮಿಸದೆ ಇದ್ದುದರಿಂದ ಅಸಮಾಧಾನಗೊಂಡ ತಿಮರೋಡಿ ಸಮಯಪಾಲನೆ ಮಾಡದ ವೈದ್ಯರ ಬಗ್ಗೆ ಅಸಮಾಧಾನಗೊಂಡು ರೇಗಾಡತೊಡಗಿದರು. ಇದೇ ವೇಳೆ ಅದೇ ಕಾರ್ಯಕ್ರಮಕ್ಕೆ ಆಸ್ಪತ್ರೆಯ ವೈದ್ಯರ ಆಹ್ವಾನದ ನಿಮಿತ್ತ ಶಾಸಕ ಹರೀಶ್ ಪೂಂಜ ಆಗಮಿಸುತ್ತಿದ್ದಾರೆಂದು ತಿಳಿದಾಗ ಮತ್ತಷ್ಟು ಆಕ್ರೋಶಗೊಂಡ ತಿಮರೋಡಿ ಸಂಘಟಕರ ವಿರುದ್ದ ಹಾರಿಹಾಯ್ದಿದ್ದಾರೆ.
ಬಳಿಕ ಕೆಲವೇ ನಿಮಿಷಗಳಲ್ಲಿ ಶಾಸಕ ಹರೀಶ್ ಪೂಂಜ ಕೂಡಾ ಅದೇ ಕಾರ್ಯಕ್ರಮಕ್ಕೆ ಹಾಜರಾಗಿದ್ದಾರೆ. ಶಾಸಕ ಹಾಗೂ ತಿಮರೋಡಿ ಮುಖಾಮುಖಿಯಾದರೂ ಒಬ್ಬರನ್ನೊಬ್ಬರು ಮಾತನಾಡಿಸಲು ಹೋಗದೆ, ಬಳಿಕ ಸ್ಚಚ್ಛತಾ ಕಾರ್ಯಕ್ರಮಕ್ಕೆ ಇಬ್ಬರೂ ಚಾಲನೆ ನೀಡಿದರು. ಆದರೆ ಅಲ್ಲಿದ್ದ ಸಾರ್ವಜನಿಕರಿಗೆ ಎರಡು ಗುಂಪುಗಳ ಮದ್ಯೆ ಇನ್ನೇನಾದರೂ ಜಟಾಪಟಿಯಾಗಬಹುದೆಂಬ ಭಯ ಆವರಿಸಿತ್ತು. ಶಾಸಕ ಹರೀಶ್ ಪೂಂಜಾ ಕಾರ್ಯಕ್ರಮದ ಬಳಿಕ ಭಾಷಣ ಮಾಡಿ ಸುಮಾರು ಹದಿನೈದು ನಿಮಿಷಗಳ ಕಾಲ ಆಸ್ಪತ್ರೆಯ ವೈದ್ಯರನ್ನು ಸಿಬ್ಬಂದಿಗಳನ್ನು ಹಾಗೂ ಅಲ್ಲಿದ್ದ ಸಂಘಟಕರ ಯೋಗಕ್ಷೇಮ ವಿಚಾರಿಸಿ ಅಲ್ಲಿಂದ ತೆರಳಿದರು.
ಶಾಸಕರಿರುವವರೆಗೆ ತುಟಿಪಿಟಕ್ ಮಹೇಶ್ ಶೆಟ್ಟಿ ತಿಮರೋಡಿ, ಶಾಸಕರು ತೆರಳಿದ ಬಳಿಕ ಮತ್ತೆ ವೈದ್ಯರ ಮೇಲೆ, ಸಂಘಟಕರ ಮೇಲೆ ವಾಗ್ದಾಳಿ ನಡೆಸಲು ಪ್ರಾರಂಭಿಸಿದರು. ಶಾಸಕರನ್ನು ಯಾಕೆ ಮತ್ತು ಯಾರು ಕರೆದದ್ದು ಎಂದು ರೇಗಾಡಲು ಪ್ರಾರಂಭಿಸಿದರು. " ಶಾಸಕರನ್ನು ಆಹ್ವಾನಿಸಿದ ಕಾರ್ಯಕ್ರಮಕ್ಕೆ ನನ್ನನ್ನು ಕರೆಯಬಾರದು" ಎಂದು ಎಚ್ಚರಿಕೆ ನೀಡಿದರು. ಶಾಸಕರಿಗೆ ಸರಿಯಾದ ರೀತಿಯಲ್ಲಿ ಉತ್ತರ ಕೊಡಲು ಸೂಕ್ತ ವೇದಿಕೆಗೆ ಕಾಯುತ್ತಿದ್ದೇನೆ. ನಾನು ಯಾರನ್ನೂ ಬಿಡುವವನಲ್ಲಾ ಎಂದೆಲ್ಲಾ ರೇಗಾಡ ತೊಡಗಿದರು. ಬಳಿಕ ರಾಜಕೇಸರಿಯವರು ಸಂಘಟನೆಯವರು ಸ್ವಚ್ಛತೆಗೆ ಮುಂದಾದಾಗ ಶಾಂತರಾದರು.