ಕಾಸರಗೋಡು, ಅ 1(SM): ತುಂಡಾಗಿ ಬಿದ್ದಿದ್ದ ತಂತಿ ತುಳಿದು ವಿದ್ಯಾರ್ಥಿ ಮೃತಪಟ್ಟು, ತಾಯಿ ಗಂಭೀರ ಗಾಯಗೊಂಡ ಘಟನೆ ಅಕ್ಟೋಬರ್ 1ರ ಸೋಮವಾರ ಸಂಜೆ ಕುಂಬ್ಡಾಜೆ ಏತಡ್ಕದಲ್ಲಿ ನಡೆದಿದೆ. ಮೃತಪಟ್ಟವಳನ್ನು ಏತಡ್ಕದ ಜಯರಾಮ ಮೂಲ್ಯ ರವರ ಪುತ್ರಿ ಅರ್ಪಿತಾ (6) ಎಂದು ಗುರುತಿಸಲಾಗಿದೆ.
ಘಟನೆಯಲ್ಲಿ ಅರ್ಪಿತಾಳ ತಾಯಿ ಜಯಂತಿ ಗಾಯಗೊಂಡಿದ್ದಾರೆ. ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅರ್ಪಿತಾಳು ಏತಡ್ಕ ಯು.ಪಿ ಶಾಲಾ ಒಂದನೇ ತರಗತಿ ವಿದ್ಯಾರ್ಥಿನಿಯಾಗಿದ್ದಳು. ಇಂದು ಸಂಜೆ ಐದು ಗಂಟೆ ಸುಮಾರಿಗೆ ಘಟನೆ ನಡೆದಿದೆ. ಸಂಜೆ ಮನೆಗೆ ಬಂದ ಬಳಿಕ ಮನೆ ಬಳಿಯ ಹಿತ್ತಲಿಗೆ ತೆರಳಿದ್ದಾಗ ಘಟನೆ ನಡೆದಿದೆ.
ಗುಡುಗು - ಮಿಂಚು ಸಹಿತ ಗಾಳಿ ಬೀಸಿದ್ದು, ಈ ಸಂದರ್ಭದಲ್ಲಿ ಮರ ಬಿದ್ದು ವಿದ್ಯುತ್ ತಂತಿ ತುಂಡಾಗಿ ಬಿದ್ದಿದ್ದು ಸ್ಥಳದಲ್ಲೇ ಇದ್ದ ಇಬ್ಬರಿಗೆ ವಿದ್ಯುತ್ ಶಾಕ್ ತಗಳಿದೆ. ಸ್ಥಳೀಯರು ಕೂಡಲೇ ಇಬ್ಬರನ್ನು ಬದಿಯಡ್ಕದ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ, ಅರ್ಪಿತಾಳ ಜೀವ ಉಳಿಸಲಾಗಲಿಲ್ಲ.
ಈ ಬಗ್ಗೆ ಬದಿಯಡ್ಕ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.