ಬೆಂಗಳೂರು,ಅ 1 (MSP): ಜಿಮ್ ಟ್ರೈನರ್ ಪಾನಿಪುರಿ ಕಿಟ್ಟಿಯ ಅಣ್ಣನ ಮಗ ಮಾರುತಿಗೌಡ ಅವರನ್ನು ಕಿಡ್ನಾಪ್ ನಡೆಸಿ ಹಲ್ಲೆ ನಡೆಸಿದ್ದ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ನಟ ದುನಿಯಾ ವಿಜಯ್ ಅವರಿಗೆ ಕೊನೆಗೂ ಬೆಂಗಳೂರಿನ 70ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಜಾಮೀನು ಮಂಜೂರು ಮಾಡುವ ಮೊದಲು ನಟ ದುನಿಯಾ ವಿಜಯ್ ಗೆ ನ್ಯಾಯಧೀಶರು ಖಡಕ್ ವಾರ್ನಿಂಗ್ ಮಾಡಿದ್ರು. ಇನ್ನು ಮುಂದೆ ವಿಜಯ್ ಅವರ ದುಂಡಾವರ್ತನೆ ಇಲ್ಲಿಗೆ ಕೊನೆಗೊಳ್ಳಬೇಕು. ಇದೇ ವರ್ತನೆ ಮುಂದುವರಿದರೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಅವರ ವಕೀಲರ ಮೂಲಕ ಎಚ್ಚರಿಕೆ ನೀಡಿದ್ರು. ಈಗ ಜಾಮೀನು ಮಂಜೂರು ಮಾಡಿದ್ದೇನೆ. ಇನ್ಮುಂದೆ ಮುಂದೆ ಹೀಗೆ ವರ್ತಿಸದಿರಿ, ಸಿನಿಮಾದಲ್ಲಿ ಹೀರೋ ಆಗಿರುವ ನೀವು ಸಮಾಜಕ್ಕೆ ರೋಲ್ ಮಾಡಲ್ ಆಗುವಂತೆ ಜೀವನ ನಡೆಸಬೇಕು ಎಂದು ದುನಿಯಾ ವಿಜಯ್ ಪರ ವಕೀಲರಿಗೆ ಸೂಚಿಸಿ ಜಾಮೀನು ಮಂಜೂರು ಮಾಡಿದರು.
1 ಲಕ್ಷ ರೂ. ಬಾಂಡ್ ಹಾಗೂ ಎರಡು ಶ್ಯೂರಿಟಿ, ಪ್ರಭಾವ ಬೀರಿ ಯಾವುದೇ ಸಾಕ್ಷ್ಯ ನಾಶಕ್ಕೆ ಯತ್ನಿಸಬಾರದು. ತನಿಖೆಗೆ ಎಲ್ಲಾ ರೀತಿಯಲ್ಲೂ ಸಹಕರಿಸಿಬೇಕು ಎಂದು ಷರತ್ತು ವಿಧಿಸಿ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಮ್ಯಾಜಿಸ್ಟ್ರೇಟ್ ಕೋರ್ಟ್ ನಟ ದುನಿಯಾ ವಿಜಯ್ ಜಾಮೀನು ಅರ್ಜಿಯನ್ನು ವಜಾಗೊಳಿಸಿದ ಹಿನ್ನೆಲೆಯಲ್ಲಿ, ಆರೋಪಿ ಪರ ವಕೀಲರು ಜಾಮೀನು ಕೋರಿ ಸೆಷನ್ಸ್ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯದಿಂದ ಜಾಮೀನು ದೊರೆತ ಹಿನ್ನೆಲೆಯಲ್ಲಿ ನಟ ವಿಜಯ್ ಪರ ವಕೀಲರು ಪರಪ್ಪನ ಅಗ್ರಹಾರಕ್ಕೆ ತೆರಳಿದ್ದು, ಹೀಗಾಗಿ ಅವರು ಇಂದೇ ಬಿಡುಗಡೆಯಾಗುವ ಸಾಧ್ಯತೆಯಿದೆ.