ಮಂಗಳೂರು, ಅ 1 (MSP): ಕೊನೆಗೂ ಶಿರಾಡಿ ಘಾಟ್, ಎಲ್ಲಾ ರೀತಿಯ ಬಸ್ ಸಂಚಾರಕ್ಕೆ ಮುಕ್ತವಾಗಲಿದೆ. ಈ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಸ್ಪಷ್ಟಪಡಿಸಿದ್ದು, ಅಕ್ಟೋಬರ್ 3ರ ಬುಧವಾರದಿಂದ ಶಿರಾಡಿ ಘಾಟ್ ನಲ್ಲಿ ಬಸ್ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಸಿದ ಪತ್ರಿಕಾಗೋಷ್ಟಿಯಲ್ಲಿ ಅ.1ರ ಸೋಮವಾರ ತಿಳಿಸಿದ್ದಾರೆ.
ಕಾಂಕ್ರೀಟ್ ರಸ್ತೆಯ ಕಾಮಗಾರಿ, ತಡೆಗೋಡೆ ನಿರ್ಮಾಣ, ಗುಡ್ಡ ಕುಸಿತ ಕಾರಣಗಳಿಂದ ಹಲವು ತಿಂಗಳುಗಳ ಕಾಲ, ಶಿರಾಡಿ ಘಾಟ್ ನಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಬಳಿಕ ತಿಂಗಳ ಹಿಂದೆಯಷ್ಟೇ ಲಘು ವಾಹನಗಳಿಗೆ ಮಾತ್ರ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು. ಸದ್ಯ ಶಿರಾಡಿ ಘಾಟ್ ನಲ್ಲಿ ಭೂ ಕುಸಿತವಾಗಿರುವ 12 ಕಡೆಗಳಲ್ಲಿ 8 ಕಡೆ ಅಪಾಯದ ಸೂಚನೆಗಳಿಲ್ಲ. ಅಪಾಯ ಸಾಧ್ಯತೆಗಳಿರುವ 4 ಕಡೆಗಳಲ್ಲಿ ಪೊಲೀಸ್ ಭದ್ರತೆಯನ್ನು ನಿಯೋಜಿಸಲಾಗಿದೆ ಎಂದಿದ್ದಾರೆ.
ಇನ್ನು ಬಸ್ ಸಂಚಾರಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಹಾಸನ ಜಿಲ್ಲಾಧಿಕಾರಿ ಹಾಗೂ ದಕ್ಷಿಣ ಕನ್ನಡ ಪೋಲೀಸ್ ಅಧೀಕ್ಷಕರೊಡನೆ ಚರ್ಚೆ ನಡೆಸಲಾಗಿದೆ. ಮುಂದಿನ ಒಂದೆರಡು ವಾರದ ಬಳಿಕ ಪರಿಸ್ಥಿತಿಯನ್ನು ಅವಲೋಕಿಸಿ ಘನ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸುವ ಬಗ್ಗೆ ತೀರ್ಮಾನಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.