ನವದೆಹಲಿ, ಅ 1 (MSP): ದೇಶದ ಅತಿದೊಡ್ಡ ಬ್ಯಾಂಕ್ ಗಳಲ್ಲಿ ಒಂದಾಗಿರುವ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ಬಿಐ) ಹೊಸ ನಿಯಮವೊಂದನ್ನು ಜಾರಿಗೊಳಿಸಿದ್ದು, ಇದರಿಂದ ಗ್ರಾಹಕರು ಮತ್ತೊಮ್ಮೆ ತೊಂದರೆಗೊಳಗಾಗುವ ಲಕ್ಷಣಗಳು ಗೋಚರಿಸತೊಡಗಿದೆ. ಇನ್ನು ಮುಂದೆ ಎಸ್ಬಿಐ ಎಟಿಎಂ ಡೆಬಿಟ್ ಕಾರ್ಡ್ ಬಳಕೆದಾರರು ಹೆಚ್ಚು ಹಣವನ್ನು ವಿದ್ ಡ್ರಾ ಮಾಡುವಂತಿಲ್ಲ ಎಂಬ ನಿಯಮವನ್ನು ಜಾರಿಗೊಳಿಸಿದೆ.
ಈ ನಿಯಮವು ಇದೇ ಅಕ್ಟೋಬರ್ 31ರಿಂದ ಜಾರಿಗೆ ಬರಲಿದ್ದು, ಈ ನಿಯಮದಂತೆ ಇನ್ಮುಂದೆ ದಿನಕ್ಕೆ ಕೇವಲ ರೂ. 20 ಸಾವಿರಗಳನ್ನು ಮಾತ್ರ ವಿತ್ ಡ್ರಾ ಮಾಡಬಹುದಾಗಿದೆ. ಈಗಿನ ಗರಿಷ್ಠ 40,000 ರೂ. ಮೊತ್ತದ ಮಿತಿಯನ್ನು ಅರ್ಧಕ್ಕರ್ಧ ಇಳಿಸಿರುವುದು ಗ್ರಾಹಕರ ಅಸಮಧಾನಕ್ಕೆ ಕಾರಣವಾಗಿದೆ.ದೇಶದಲ್ಲಿ ಎಟಿಎಂ ಗಳಲ್ಲಿ ಅಕ್ರಮವಾಗಿ ಹಣ ಲಪಟಾಯಿಸುವ ಪ್ರಕರಣಗಳ ಹೆಚ್ಚುತ್ತಿರುವುದರಿಂದ ಮತ್ತು ಜನರು ಕ್ಯಾಶ್ಲೆಸ್ ವ್ಯವಹಾರದಲ್ಲಿ ಗಮನಾರ್ಹವಾಗಿ ತೊಡಗಿಸಿಕೊಳ್ಳಬೇಕು ಡಿಜಿಟಲ್ ಪೇಮೆಂಟ್ ಉತ್ತೇಜಿಸಬೇಕು
ಎನ್ನುವ ಕಾರಣಕ್ಕೆ ಎಟಿಎಂ ವಿದ್ಡ್ರಾವಲ್ ಗರಿಷ್ಠ ಮಿತಿಯನ್ನು ಅರ್ಧದಷ್ಟು ಇಳಿಸುವ ನಿಯಮವನ್ನು ಜಾರಿಗೊಳಿಸಲಾಗುತ್ತಿದೆ ಎಂದು ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದಾರೆ.ಈ ನಿಯಮಕ್ಕೆ ಸಂಬಂಧಪಟ್ಟ ಮಾಹಿತಿಯನ್ನು ಎಸ್ ಬಿಐ ತನ್ನ ಗ್ರಾಹಕರಿಗೆ ತಿಳಿಸುವಂತೆ ಭಾರತೀಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಪ್ರಧಾನ ಕಚೇರಿಯಿಂದ ಸೂಚನೆ ನೀಡಲಾಗಿದೆ ಎಂದು ವರದಿಯಾಗಿದೆ.