ಮಂಗಳೂರು, ಅ01 (MSP): ಹಿಂದೂ ಸಂಘಟನೆ ಕಾರ್ಯಕರ್ತನೋರ್ವನಿಗೆ ಬಾರ್ ಒಳಗಡೆ ಕುಳಿತಿದ್ದ ಮೂವರು ಯುವಕರು ಕುಂಕುಮ ನಾಮ ಹಾಕುವ ವಿಚಾರಕ್ಕೆ ವಾಗ್ವಾದ ನಡೆದು ಕೀಯಿಂದ ಇರಿದು ಹಲ್ಲೆ ನಡೆಸಿರುವ ಘಟನೆ ಅಸೈಗೋಳಿ ವೈಭವ್ ಬಾರಿನಲ್ಲಿ ಸೆ.30 ರ ಭಾನುವಾರ ತಡರಾತ್ರಿ ವೇಳೆ ನಡೆದಿದ್ದು, ಘಟನೆಯಲ್ಲಿ ದಾಳಿ ನಡೆಸಿದ ಓರ್ವನನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಬಾರಿನಲ್ಲಿ ಕುಳಿತಿದ್ದ ಶಮೀರ್,ಶವಾಝ್ ಮತ್ತು ಇಲಿಯಾಸ್ ಎಂಬವರು ಅಲ್ಲೇ ಕುಳಿತಿದ್ದ ರಮೇಶ್ ಜತೆಗೆ ವಾಗ್ವಾದ ನಡೆಸಿದ್ದರು. ನಾಮಧಾರಣೆ ವಿಚಾರಕ್ಕೆ ಸಂಬಂಧಿಸಿ ನಾಲ್ವರ ನಡುವೆ ತೀವ್ರ ವಾಗ್ವಾದ ನಡೆದಿತ್ತು. ಈ ವೇಳೆ ನಾಲ್ವರ ವಾದ ತಾರಕಕ್ಕೇರಿ ಮೂವರು ಸೇರಿ ರಮೇಶ್ ಮೂಗಿಗೆ ಹೊಡೆದು ಎರಡು ಕೈಗಳಿಗೆ ಕೀ ಮೂಲಕ ಇರಿದಿದ್ದಾರೆ. ಬಳಿಕ ಸ್ಥಳದಿಂದ ಮೂವರು ಪರಾರಿಯಾಗುವಷ್ಟರಲ್ಲಿ ಶವಾಝ್ ಎಂಬಾತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಗಾಯಾಳು ರಮೇಶ್ ನಾಟೆಕಲ್ ಕಣಚೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯಿಂದ ಸ್ಥಳದಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ.
ಕೊಣಾಜೆ ದಾಸರಮೂಲೆ ನಿವಾಸಿ ರಮೇಶ್ (26) ಟೈಲ್ಸ್ ಹಾಕುವ ಕಾಯಕವನ್ನು ಮಾಡುತ್ತಿದ್ದಾರೆ. ಹಿಂದೂಪರ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದರು. ಮದ್ಯದ ಅಮಲಿನಲ್ಲಿ ನಡೆದಿರುವ ಘಟನೆ ಇದಾಗಿದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆಸ್ಪತ್ರೆಗೆ ಪೊಲೀಸ್ ಕಮೀಷನರ್ ಟಿ.ಆರ್. ಸುರೇಶ್, ಡಿಸಿಪಿ ಉಮಾಪ್ರಶಾಂತ್, ಕೊಣಾಜೆ ಠಾಣಾಧಿಕಾರಿ ರವೀಶ್ ನಾಯ್ಕ್, ಉಳ್ಳಾಲ ಠಾಣಾಧಿಕಾರಿ ಗೋಪಿಕೃಷ್ಣ ಭೇಟಿ ನೀಡಿ ತನಿಖೆ ಕೈಗೆತ್ತಿಕೊಂಡಿದ್ದಾರೆ.