ಮಂಗಳೂರು, ಸೆ 30 (MSP) : ಮೋದಿ ಜತೆ ಮಾತನಾಡಬೇಕೆ? ದಕ್ಷಿಣ ಕನ್ನಡ ಜನತೆಗೆ ಸಂವಾದದ ಅವಕಾಶವಿದೆ - ಸೆ.30 ರಂದು ಮಂಗಳೂರಿನ ರಾಷ್ಟ್ರ ಕವಿ ಮಂಜೇಶ್ವರ ಗೋವಿಂದ ಪೈ ವೃತ್ತದ ಬಳಿ ಇರುವ ಟಿ.ವಿ.ರಮಣ ಪೈ ಹಾಲ್ ಗೆ ಬನ್ನಿ ಎಂದು ಸಾಮಾಜಿಕ ತಾಣಗಳಲ್ಲಿ ಸುದ್ದಿ ಹಬ್ಬಿಸಿದ್ದ ದ.ಕ ಜಿಲ್ಲಾ ಬಿಜೆಪಿ ಘಟಕ ಕೊನೆಗೆ ಪೇಚಿಗೆ ಸಿಲುಕಿದ ಘಟನೆ ನಡೆದಿದೆ. ಜಿಲ್ಲಾ ಬಿಜೆಪಿ ಘಟಕವು ಭಾನುವಾರ ಬೆಳಗ್ಗೆ10.30ರಿಂದ 12 ಗಂಟೆವರೆಗೆ ನಡೆಸುವ ಪ್ರಧಾನಿ ಮೋದಿ ಅವರ ಮನ್ ಕೀ ಬಾತ್ ನಲ್ಲಿ ಈ ಬಾರಿ ದಕ್ಷಿಣ ಜಿಲ್ಲೆಯ ಜನತೆಗೆ ಸಂವಾದ ನಡೆಸುವ ಅವಕಾಶ ಲಭಿಸಲಿದೆ ಎಂದು ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿತ್ತು.
ಹೀಗಾಗಿ ಸಾರ್ವಜನಿಕರು, ಬಿಜೆಪಿ ಕಾರ್ಯಕರ್ತರು ಮೋದಿ ಜೊತೆ ಸಂವಾದ ನಡೆಸೋ ಆಸೆಯಿಂದ ನಗರದ ರಮಣ ಪೈ ಹಾಲ್ ಗೆ ಬೆಳಗ್ಗೆ 10 ಗಂಟೆಯಿಂದಲೇ ಆಗಮಿಸತೊಡಗಿದ್ದಾರೆ. ಕೆಲವೇ ನಿಮಿಷದಲ್ಲಿ ಸಭಾಂಗಣದಲ್ಲಿ ಕಿಕ್ಕಿರಿದು ಜನ ತುಂಬತೊಡಗಿದ್ದಾರೆ. ಅಲ್ಲಿ ನೆರೆದಿದ್ದ ಪ್ರತಿ ವ್ಯಕ್ತಿಗೂ ಮೋದಿ ಜತೆ ಮಾತನಾಡುವ ಕುತೂಹಲ, ಕಾತರವಿತ್ತು. ಇದಕ್ಕೆ ತಕ್ಕಂತೆ ಹಾಲ್ ನಲ್ಲಿ ಬೃಹತ್ ಪರದೆಗಳನ್ನು ಅಳವಡಿಸಿ ಜಿಲ್ಲಾ ಬಿಜೆಪಿ ಘಟಕ ಸಿದ್ದತೆ ಮಾಡಿಕೊಂಡಿತ್ತು. ಜತೆಗೆ ಜಿಲ್ಲೆಯ ಬಿಜೆಪಿ ಘಟಾನುಘಟಿಗಳಾದ, ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ವೇದವ್ಯಾಸ್ ಕಾಮತ್, ಶಾಸಕ ಡಾ.ವೈ ಭರತ್ ಶೆಟ್ಟಿ, ಮುಖಂಡ ಗಣೇಶ್ ಕಾರ್ಣಿಕ್ ಮುಂತಾದವರು ಹಾಜರಿದ್ದರು. ಆದರೆ ಮೋದಿ ಸಂವಾದದ ಬದಲು ಅಲ್ಲಿ ನಡೆದದ್ದೇ ಬೇರೆ. ಸರಿಯಾಗಿ 11 ಗಂಟೆಗೆ ಹಾಲ್ ನಲ್ಲಿ ಅಳವಡಿಸಲಾದ ಬೃಹತ್ ಪರದೆಯಲ್ಲಿ ಮೋದಿ ಅವರ ಮನ್ ಕೀ ಬಾತ್ ಕಾರ್ಯಕ್ರಮ ಪ್ರಸಾರವಾಗತೊಡಗಿ , 11.30ಕ್ಕೆ ಮುಕ್ತಾಯವಾಯಿತು. ಜತೆಗೆ ತಮಗೆ ಇನ್ನೇನು ಮಾತನಾಡಲು ಅವಕಾಶ ಸಿಗಬಹುದೆಂಬ ಕಾತರದಲ್ಲಿರುವಾಗ ಬಿಜೆಪಿ ನಾಯಕ ಗಣೇಶ್ ಕಾರ್ನಿಕ್ ಸೇರಿದ್ದ ಜನರಿಗೆ ಧನ್ಯವಾದ ಸಲ್ಲಿಕೆ ಮಾಡಿ ಕಾರ್ಯಕ್ರಮದ ಮುಕ್ತಾಯದ ಸೂಚನೆ ನೀಡಿದರು.
ಇದರಿಂದ ಮೋದಿ ಜೊತೆ ಸಂವಾದಕ್ಕೆ ಕಾದು ಕುಳಿತಿದ್ದ ಜನರಿಗೆ ನಿರಾಶೆಯಾಗಿದೆ. ಹೇಳಿದ್ದೇನು ಇಲ್ಲಿ ನಡೆದಿದ್ದೇನು ಎಂದು ಜನ ತಮ್ಮ ತಮ್ಮಲೇ ಪ್ರಶ್ನೆ ಮಾಡಿಕೊಂಡರು. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಮನ್ ಕೀ ಬಾತ್ ಕಾರ್ಯಕ್ರಮ ದೇಶಾದ್ಯಂದ ರೇಡಿಯೋ ಮತ್ತು ಟಿ.ವಿ ಗಳಲ್ಲಿ ಪ್ರಸಾರವಾಗುತ್ತದೆ ಇದನ್ನು ನೋಡಲು ಇಲ್ಲಿಗೆ ಬರಬೇಕಿತ್ತಾ ಎನ್ನುವ ಮಾತುಗಳು ಕೇಳಿಬಂತು. ಮನ್ ಕೀ ಬಾತ್ ಭಾಷಣ ರೆಕಾರ್ಡೆಡ್ ಕಾರ್ಯಕ್ರಮವಾಗಿದ್ದು, ನಿಗದಿತ ಸಮಯಕ್ಕೆ ದೂರದರ್ಶನ ಮತ್ತು ಆಲ್ ಇಂಡಿಯಾ ರೇಡಿಯೋ ಈ ಕಾರ್ಯಕ್ರಮವನ್ನು ಪ್ರಸಾರ ಮಾಡುತ್ತದೆ.
ಆದರೆ ಈ ಬಗ್ಗೆ ಬಿಜೆಪಿ ನಾಯಕರನ್ನು ಪ್ರಶ್ನಿಸಿದಾಗ ಅವರು ಹೇಳಿದ್ದೇ ಬೇರೆ. ಪ್ರಧಾನಿ ಮೋದಿಯವರ ಮನ್ ಕೀ ಬಾತ್ ಸಂವಾದದಲ್ಲಿ ಗೊಂದಲವಾಗಿದ್ದು ನಿಜ. ಈ ಸಂವಾದ ತಾಂತ್ರಿಕ ಸಮಸ್ಯೆಯಿಂದ ಕೈಗೂಡಲಿಲ್ಲ. ದ.ಕ ಜಿಲ್ಲೆಯ ಐದು ಪ್ರಮುಖರಲ್ಲಿ ನೇರ ಸಂವಾದ ಮಾಡಬೇಕಿತ್ತು. ಇದಕ್ಕಾಗಿ ಡಿಡಿ ವಾಹಿನಿಯ ತಾಂತ್ರಿಕ ತಂಡ ಸಂಪೂರ್ಣ ಸಿದ್ಧತೆ ನಡೆಸಿತ್ತು. ಆದರೆ ಸಭಾಂಗಣದ ಸನಿಹದಲ್ಲಿರುವ ಜಿಲ್ಲಾ ಕಾರಾಗೃಹದಲ್ಲಿ ಅಳವಡಿಸಿರುವ ಜಾಮರ್ ನಿಂದ ಕಾರ್ಯಕ್ರಮದಲ್ಲಿ ಅಡಚಣೆ ಉಂಟಾಗಿದೆ. ಸಂವಾದಲ್ಲಿ ರಾಜಸ್ಥಾನದ ವ್ಯಕ್ತಿಯೊಬ್ಬರ ಜೊತೆ ಮೋದಿ ಮಾಡಿದ್ದಾರೆ. ಜನ ನಿರೀಕ್ಷೆಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರೂ ಅವರ ನಿರೀಕ್ಷೆಯಂತೆ ಪ್ರಧಾನಿಯವರೊಂದಿಗೆ ಮಾತನಾಡುವ ಅವಕಾಶ ಸಿಗದೇ ಇರುವುದಕ್ಕೆ ವಿಷಾದವಾಗಿದೆ ಎಂದು ತಿಳಿಸಿದೆ