ಕುಂದಾಪುರ, ಸೆ 30 (MSP): ಭಾನುವಾರ ರಜೆಯ ಖುಷಿಯಲ್ಲಿ ಸಮುದ್ರ ತೀರದಲ್ಲಿ ವಾಲಿಬಾಲ್ ಆಡಲು ಹೋದಾತ ಸಮುದ್ರ ಪಾಲಾಗಿ ನಾಪತ್ತೆಯಾದ ಘಟನೆ ಕೋಡಿ ಬೀಚ್ನಲ್ಲಿ ಸೆ30 ರಂದು ಮಧ್ಯಾಹ್ನ ಸುಮಾರು 12.30ರ ಹೊತ್ತಿಗೆ ಸಂಭವಿಸಿದೆ. ಘಟನೆಯಲ್ಲಿ ಸಮುದ್ರಪಾಲಾಗಿ ನಾಪತ್ತೆಯಾದ ವ್ಯಕ್ತಿಯನ್ನು ಕೋಡಿಯ ಹಳಅಳಿವೆ ನಿವಾಸಿ ಮಂಜ ಪೂಜಾರಿ ಹಾಗೂ ದೇವಿ ಪೂಜಾರಿ ದಂಪತಿಗಳ ಪುತ್ರ ಮನೋಜ್ ಪೂಜಾರಿ (18) ಎಂದು ಗುರುತಿಸಲಾಗಿದೆ.
ಮನೋಜ್ ಪೂಜಾರಿ
ಮನೋಜ್ ಪೂಜಾರಿ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿಯಾಗಿದ್ದು, ಭಾನುವಾರ ರಜೆ ಇದ್ದ ಕಾರಣ ಸ್ನೇಹಿತರ ಜೊತೆಗೆ ಬೀಚ್ನಲ್ಲಿ ವಾಲಿಬಾಲ್ ಆಡಲೆಂದು ತಿಳಿಸಿ ಹೋಗಿದ್ದ. ಆಟ ಆಡುವ ವೇಳೆ ವಾಲಿಬಾಲ್ ಸಮುದ್ರಕ್ಕೆ ಎಸೆಯಲ್ಪಟ್ಟಿದ್ದು, ಅದನ್ನು ತರಲೆಂದು ಮನೋಜ್ ಸಮುದ್ರಕ್ಕೆ ಇಳಿದಿದ್ದ ಎನ್ನಲಾಗಿದೆ. ಇದೇ ಸಂದರ್ಭ ರಭಸವಾದ ಅಲೆಗಳು ಅಪ್ಪಳಿಸಿದ್ದು, ನಿಯಂತ್ರಣ ತಪ್ಪಿದ ಮನೋಜ್ ಪೂಜಾರಿ ಸಮುದ್ರ ಪಾಲಾಗಿದ್ದಾನೆ. ಮನೋಜ್ ಇದೀಗ ನಾಪತ್ತೆಯಾಗಿದ್ದು, ಸ್ಥಳೀಯರು ನೂರಾರು ಜನ ಆತನ ಹುಡುಕಾಟದಲ್ಲಿ ತೊಡಗಿದ್ದಾರೆ. ಮನೋಜ್ ಅಪ್ಪ, ಅಮ್ಮ ಹಾಗೂ ಇಬ್ಬರು ತಂಗಿಯರನ್ನು ಅಗಲಿದ್ದಾನೆ. ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.