ಮಂಡ್ಯ, ಸೆ 30 (MSP): ಸಾಲ ತೀರಿಸಲು ಕಿಡ್ನಿ ಮಾರಾಟಕ್ಕೆ ಮುಂದಾದ ಯುವಕನೋರ್ವ ಶನಿವಾರ 'ಕಿಡ್ನಿ ದೊರೆಯುತ್ತದೆ ಸಂಪರ್ಕಿಸಿರಿ' ಎಂದು ಚೀಟಿ ಬರೆದು ತನ್ನ ಅಂಗಡಿಗೆ ಅಂಟಿಸಿದ್ದಾನೆ. ಹೌದು, ಇದು ಆಶ್ಚರ್ಯ ವಿಷಯವಾದರೂ ಸತ್ಯ ಘಟನೆ. ಮಂಡ್ಯ ತಾಲೂಕು ತಗ್ಗಹಳ್ಳಿ ನಿವಾಸಿ ವಿನೋದ್ಕುಮಾರ್(24) ಎಂಬಾತ ಕಿಡ್ನಿ ಮಾರಾಟಕ್ಕೆ ಯತ್ನಿಸಿ ಕೊನೆಗೆ ಆಸ್ಪತ್ರೆ ಸೇರಿದ್ದಾನೆ. ಅವರು ಮಂಡ್ಯದ ಬಿ.ಜಿ.ದಾಸೇಗೌಡ ವೃತ್ತದ ಬಳಿ ಮಧುರಾ ಟೀಸ್ಟಾಲ್ ನಡೆಸುತ್ತಿದ್ದು, ಶನಿವಾರ ಬೆಳಗ್ಗೆ ಟೀಸ್ಟಾಲ್ನ ಬಾಗಿಲು ತೆರೆಯುತ್ತಿದ್ದಂತೆ ಕಂಪ್ಯೂಟರ್ನಲ್ಲಿ ಪ್ರಿಂಟ್ ತೆಗೆದು ತಂದಿದ್ದ 'ನನ್ನ ಕಿಡ್ನಿ ಮಾರಾಟಕ್ಕಿದೆ, ಸಂಪರ್ಕಿಸಿ' ಎಂದು ಮೊಬೈಲ್ ನಂಬರ್ ಹಾಕಿದ್ದ ಹಾಳೆಯನ್ನು ಕ್ಯಾಂಟೀನ್ನ ಗೋಡೆಗೆ ಅಂಟಿಸಿದ್ದಾರೆ.
ಇದನ್ನು ಕಂಡ ಜನರು ವಿನೋದ್ ಕುಮಾರ್ ಅವರಿಗೆ ಬುದ್ದಿ ಹೇಳಲು ಯತ್ನಿಸಿದರು. ಆದರೆ ಬುದ್ಧಿ ಹೇಳಲು ಬಂದವರ ವಿರುದ್ಧವೇ ವಿನೋದ್ಕುಮಾರ್ ತಿರುಗಿ ಬಿದ್ದು, ತನ್ನ ಸಹವಾಸಕ್ಕೆ ಯಾರೂ ಬರಬಾರದು ಎಂದು ಹರಿಹಾಯ್ದರು. ಕೊನೆಗೆ ವಿಚಾರ ಊರತುಂಬಾ ಹರಡಿ ಪೊಲೀಸರ ಕಿವಿಗೂ ಬಿದ್ದು , ತಕ್ಷಣ ಅಂಗಡಿಯತ್ತ ಪೂರ್ವ ಠಾಣೆಯ ಪೊಲೀಸರು ಬಂದು ಕ್ಯಾಂಟೀನ್ ಬಾಗಿಲು ಮುಚ್ಚಿಸಿ ಅಂಟಿಸಿದ್ದ ಚೀಟಿಯನ್ನು ಕಿತ್ತು ಹಾಕಿತಕ್ಷಣವೇ ಯುವಕನನ್ನು ವಶಕ್ಕೆ ಪಡೆದು, ಠಾಣೆಗೆ ಕರೆತಂದಿದ್ದಾರೆ.
'ತಾನು ಮನೆ ನಿರ್ಮಾಣಕ್ಕಾಗಿ ಸಾಲ ಮಾಡಿದ್ದು, ಬಡ್ಡಿ ಕಟ್ಟಲು ಸಾದ್ಯವಾಗದೆ ಒದ್ದಾಡುತ್ತಿದ್ದೇನೆ. ಜಮೀನನ್ನು ಮಾರಾಟ ಮಾಡಿಯೋ ಅಥವಾ ಅಡವಿಟ್ಟು ಸಾಲ ತೀರಿಸೋಣವೆಂದರೆ ನಾಡಕಚೇರಿಯಲ್ಲಿ ಜಮೀನಿನ ಸ್ಕೆಚ್ ನೀಡುತ್ತಿಲ್ಲ. ನನ್ನ ಚಿಕ್ಕಪ್ಪನಲ್ಲೂ 50 ಸಾವಿರ ರೂ. ಸಾಲ ಪಡೆದಿದ್ದು, ಅವರೂ ಅದನ್ನು ವಾಪಾಸ್ ಕೇಳುತ್ತಿದ್ದಾರೆ. ಏನಾದರೂ ಮಾಡಿ ಅವರಿಗೆ ಹಣ ಕೊಟ್ಟು ಬಿಡಬೇಕು. ಸಾಲಕ್ಕೆ ಹೆದರಿ ನಾನು ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ. ಹೀಗಾಗಿ ಕಿಡ್ನಿಯನ್ನಾದರೂ ಮಾರಾಟ ಮಾಡಿ ಸಾಲ ತೀರಿಸಲು ನಿರ್ಧರಿಸಿದ್ದೇನೆ,'' ಎಂದು ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ.
ನಂತರ ಯುವಕನ ಪೋಷಕರನ್ನು ಪೊಲೀಸರು ಸಂಪರ್ಕಿಸಿ ಮಾಹಿತಿ ನೀಡಿದ್ದಾರೆ. ಪೋಷಕರು ಆತ ಒಂದು ವಾರದಿಂದ ವಿಚಿತ್ರವಾಗಿ ವರ್ತಿಸುತ್ತಿರುವ ಮಾಹಿತಿ ನೀಡಿದ್ದಾರೆ. ಹೀಗಾಗಿ ಯುವಕನ ವರ್ತನೆಯನ್ನು ಗಮನಿಸಿದ ಪೊಲೀಸರು, ಯುವಕನನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ''ಯುವಕನು ಮಾನಸಿಕವಾಗಿ ಡಿಸ್ಟರ್ಬ್ ಆಗಿದ್ದಾನೆ. ಹೀಗಾಗಿ ಆತನಿಗೆ ಹೆಚ್ಚಿನ ಚಿಕಿತ್ಸೆ ಅಗತ್ಯವಿದೆ,'' ಎಂದೇಳಿ ನಿಮ್ಹಾನ್ಸ್ಗೆ ಕರೆದೊಯ್ಯುವಂತೆ ಮಿಮ್ಸ್ ವೈದ್ಯರು ಪೊಲೀಸರಿಗೆ ಸಲಹೆ ನೀಡಿದ್ದಾರೆ. ಅದರಂತೆ ಆತನನ್ನು ಪೊಲೀಸರು ಶನಿವಾರ ಸಂಜೆ ಮಂಡ್ಯದಿಂದ ಅ್ಯಂಬುಲೆನ್ಸ್ ಮೂಲಕ ಬೆಂಗಳೂರಿನ ನಿಮ್ಹಾನ್ಸ್ಗೆ ಕಳುಹಿಸಿದ್ದಾರೆ.