ಉಡುಪಿ, ಸೆ 30 (MSP): ಮೂರು ವರ್ಷಗಳ ಹಿಂದೆ ಮಲ್ಪೆ ಠಾಣಾ ವ್ಯಾಪ್ತಿಯಲ್ಲಿ ಅಪ್ರಾಪ್ತ ಬುದ್ಧಿಮಾಂದ್ಯ ಬಾಲಕಿಯ ಮೇಲೆ ಸ್ವಂತ ಅಣ್ಣನೇ ಅತ್ಯಾಚಾರ ಮಾಡಿ ಗರ್ಭವತಿಯನ್ನಾಗಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಅಣ್ಣನಿಗೆ 10 ವರ್ಷ ಜೈಲು ಶಿಕ್ಷೆ ಹಾಗೂ 10 ಸಾವಿರ ದಂಡ ವಿಧಿಸಿ ಉಡುಪಿ ಜಿಲ್ಲಾ ವಿಶೇಷ ಮತ್ತು ಸತ್ರ ನ್ಯಾಯಾಲಯ ಶನಿವಾರ ಮಹತ್ವದ ತೀರ್ಪು ನೀಡಿದೆ.ಮಲ್ಪೆ ಠಾಣೆ ವ್ಯಾಪ್ತಿಯ ನಿವಾಸಿ ಶ್ರೀಧರ್ (22) ಶಿಕ್ಷೆಗೆ ಒಳಗಾದ ಆರೋಪಿ.
ಘಟನೆಯ ಹಿನ್ನೆಲೆ: 2015ರ ಸೆಪ್ಟೆಂಬರ್ ೭ರಂದು ಬುದ್ದಿಮಾಂದ್ಯ ಅಪ್ರಾಪ್ತ ಬಾಲಕಿಯನ್ನು ಅನಾರೋಗ್ಯದ ಸಮಸ್ಯೆಯಿಂದ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಕೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಆಕೆ ಗರ್ಭವತಿಯಾಗಿರುವುದು ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಮನೆಯವರು 2015ರ ಸೆ. 16 ರಂದು ಮಲ್ಪೆ ಠಾಣೆಯಲ್ಲಿ ಪೋಕ್ಸೊ ಕಾಯಿದೆಯಡಿ ದೂರು ದಾಖಲಿಸಿದ್ದರು. ಅಪ್ತಾಪ್ತ ವಯಸ್ಸಿನಲ್ಲಿ ಗರ್ಭಿಣಿಯಾಗಿದ್ದರಿಂದ ಮಾನವೀಯ ನೆಲೆಯಲ್ಲಿ ಹಾಗೂ ಆಕೆಯ ಆರೋಗ್ಯದ ಮೇಲೆ ಪರಿಣಾಮ ಬೀರುವ ಕಾರಣಕ್ಕೆ ನ್ಯಾಯಾಲಯವು ಆಕೆಯ ಗರ್ಭಪಾತಕ್ಕೆ ಅನುಮತಿ ಕೊಟ್ಟಿತ್ತು. ಬಾಲಕಿ ನೀಡಿದ ಸುಳಿವಿನ ಮೇರೆಗೆ ಸಹೋದರ ಸೇರಿ ಹಲವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗಿತ್ತು.
ಪ್ರಕರಣದ ತನಿಖೆ ನಡೆಸಿದ ಪೊಲೀಸರು ಡಿಎನ್ ಎ ಟೆಸ್ಟ್ ಮೂಲಕ ಬಾಲಕಿಯ ಸ್ವಂತ ಅಣ್ಣನೇ ಬಾಲಕಿಗೆ ಅತ್ಯಾಚಾರ ಮಾಡಿದ್ದ ಎಂಬುವುದನ್ನು ಪತ್ತೆಹಚ್ಚಿ, ಆತನನ್ನು ಬಂಧಿಸಿದ್ದರು. ಅಂದಿನ ವೃತ್ತ ನಿರೀಕ್ಷಕ ಶ್ರೀಕಾಂತ್ ಪ್ರಕರಣದ ತನಿಖೆ ನಡೆಸಿ ದೋಷಾರೋಪಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.ಪ್ರಕರಣದ ಸಂಬಂಧಿಸಿ 37 ಸಾಕ್ಷಿಗಳ ಹೇಳಿಕೆ, 54 ದಾಖಲೆ ಹಾಗೂ ಡಿಎನ್ಎ ಟೆಸ್ಟ್ ನ್ನು ಆಧರಿಸಿ ನ್ಯಾಯಾಧೀಶ ವೆಂಕಟೇಶ್ ನಾಯ್ಕ್ ಅವರು ಇಂದು ಆರೋಪಿಗೆ ಈ ಮೇಲಿನಂತೆ ಶಿಕ್ಷೆಯನ್ನು ಪ್ರಕಟಿಸಿದ್ದಾರೆ. ಸರ್ಕಾರದ ಪರವಾಗಿ ಪೋಕ್ಸೊ ಜಿಲ್ಲಾ ವಿಶೇಷ ಸರ್ಕಾರಿ ಅಭಿಯೋಜಕ ವಾಸುವಿಜಯ ಪೂಜಾರಿ ವಾದಿಸಿದ್ದರು.