ಉಳ್ಳಾಲ, ಸೆ 30 (MSP): ವೀಕೆಂಡ್ ಪಾರ್ಟಿ ಮುಗಿಸಿ ಅತಿ ವೇಗದಲ್ಲಿ ತೆರಳುತ್ತಿದ್ದ ನಾಲ್ವರು ವೈದ್ಯಕೀಯ ವಿದ್ಯಾರ್ಥಿಗಳಿದ್ದ ಕಾರು ಇನ್ನೊಂದು ಕಾರಿಗೆ ಢಿಕ್ಕಿ ಹೊಡೆದು ಬಳಿಕ ಸ್ಕೂಟರಿಗೆ ಢಿಕ್ಕಿ ಹೊಡೆದು ಎರಡು ಪಲ್ಟಿ ಹೊಡೆದಿರುವ ಘಟನೆ ಪಂಡಿತ್ ಹೌಸ್ ಜಂಕ್ಷನ್ನಿನಲ್ಲಿ ಸೆ.29 ರ ಶನಿವಾರ ತಡರಾತ್ರಿ ವೇಳೆ ಸಂಭವಿಸಿದೆ.
ಇಬ್ಬರು ವಿದ್ಯಾರ್ಥಿಗಳು ಹಾಗೂ ಇಬ್ಬರು ವಿದ್ಯಾರ್ಥಿನಿಯರಿದ್ದ ಕಾರು ಕುತ್ತಾರು ಕಡೆಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಸಂದರ್ಭ ಅವಘಢ ಸಂಭವಿಸಿದೆ. ಅಮಿತ ವೇಗದಲ್ಲಿ ಬಂದ ಕಾರು ಪಂಡಿತ್ ಹೌಸ್ ಗ್ಯಾರೇಜ್ ಎದುರುಗಡೆ ನಿಂತಿದ್ದ ಹೊಸತಾಗಿ ಖರೀದಿಸಿ ಹುಂಡೈ ವರ್ನಾ ಕಾರಿಗೆ ಢಿಕ್ಕಿ ಹೊಡೆದು, ಬಳಿಕ ಎದುರಿನಿಂದ ಬರುತ್ತಿದ್ದ ಆಕ್ಟಿವಾ ಸ್ಕೂಟರಿಗೆ ಢಿಕ್ಕಿ ಹೊಡೆದು ಜಂಕ್ಷನ್ನಿನಲ್ಲಿ ಎರಡು ಪಲ್ಟಿಯಾಗಿ ನಿಂತಿತು. ಘಟನೆಯಲ್ಲಿ ಕಾರಿನೊಳಗಿದ್ದ ವಿದ್ಯಾರ್ಥಿಗಳಿಗೆ ಸ್ವಲ್ಪ ಗಾಯವಾಗಿದೆ. ಸ್ಕೂಟರ್ ಸವಾರ ಪವಾಡಸದೃಶರಾಗಿ ಪಾರಾಗಿದ್ದಾರೆ. ಅಪಘಾತಕ್ಕೆ ಕಾರಣವಾದ ಕಾರಿನಲ್ಲಿದ್ದ ವಿದ್ಯಾರ್ಥಿಗಳು ಮದ್ಯಸೇವಿಸಿದ್ದರೆಂದು ಸ್ಥಳೀಯರು ಆರೋಪಿಸಿದ್ದಾರೆ. ವೀಕೆಂಡ್ ಪಾರ್ಟಿ ಮುಗಿಸಿ ಮಂಗಳೂರಿಗೆ ವಾಪಸ್ಸಾಗುವಾಗ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.