ಮಂಗಳೂರು, ಸೆ29(SS): ಪಾಕಿಸ್ತಾನದ ಉಗ್ರರು ನಡೆಸಿದ್ದ ಭಯೋತ್ಪಾದನಾ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆಯು ನಡೆಸಿದ್ದ ಸರ್ಜಿಕಲ್ ದಾಳಿಗೆ ಇಂದು ಎರಡು ವರ್ಷ ಪೂರ್ಣಗೊಂಡಿದೆ. ಈ ಹಿನ್ನೆಲೆಯಲ್ಲಿ, ಕದ್ರಿ ಬಳಿಯಿರುವ ಹುತಾತ್ಮ ಯೋಧರ ಸ್ಮಾರಕದಲ್ಲಿ 2 ವರ್ಷದ ವರ್ಷಾಚರಣೆಯನ್ನು ಭಾರತೀಯ ಜನತಾ ಪಾರ್ಟಿ ನೆರವೇರಿಸಿದೆ. ಮಾತ್ರವಲ್ಲ, ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಿದೆ.
ಜಮ್ಮು ಮತ್ತು ಕಾಶ್ಮೀರದ ಉರಿ ಸೇನಾ ನೆಲೆ ಮೇಲೆ 2016ರ ಸೆಪ್ಟೆಂಬರ್ 18 ರಂದು ಪಾಕಿಸ್ತಾನದ ಉಗ್ರರು ದಾಳಿ ನಡೆಸಿ ಯೋಧರನ್ನು ಬರ್ಬರವಾಗಿ ಹತ್ಯೆ ಮಾಡಿದ್ದರು. ಇದಕ್ಕೆ ಪ್ರತೀಕಾರವಾಗಿ ಭಾರತೀಯ ಸೇನೆ ಐತಿಹಾಸಿಕ ಸರ್ಜಿಕಲ್ ದಾಳಿ ನಡೆಸಿತ್ತು. ಈ ದಾಳಿಗೆ 2 ವರ್ಷದ ವರ್ಷಾಚರಣೆಯನ್ನು ಭಾರತೀಯ ಜನತಾ ಪಾರ್ಟಿ (ಮಂಗಳೂರು ನಗರ ದಕ್ಷಿಣ) ವತಿಯಿಂದ ನೆರವೇರಿಸಲಾಗಿದೆ.
ಜಮ್ಮು-ಕಾಶ್ಮೀರದ ಉರಿ ಸೇನಾ ನೆಲೆ ಮೇಲೆ ಉಗ್ರರ ದಾಳಿಗೆ ಪ್ರತೀಕಾರವಾಗಿ 2016ರ ಸೆ.28ರಂದು ಭಾರತೀಯ ಸೇನೆ ನಡೆಸಿದ ಈ ಕಾರ್ಯಾಚರಣೆಯಲ್ಲಿ ಹುತಾತ್ಮರಾದ ವೀರ ಯೋಧರಿಗೆ ಬಿಜೆಪಿಯ ಪ್ರಮುಖರಾದ ಕ್ಯಾ. ಗಣೇಶ್ ಕಾರ್ಣೀಕ್, ಶಾಸಕ ವೇದವ್ಯಾಸ್ ಕಾಮತ್, ಸುಧೀರ್ ಶೆಟ್ಟಿ, ಎನ್. ಯೊಗೀಶ್ ಭಟ್, ಪೂಜಾ ಪೈ, ಕರ್ನಲ್ ಶರತ್ ಭಂಡಾರಿ ಮತ್ತಿತ್ತರರು ನಮನ ಸಲ್ಲಿಸಿದರು.
ಭಾರತ ತನ್ನ ಸರ್ಜಿಕಲ್ ಸ್ಟ್ರೈಕ್ ಮುಖಾಂತರ ಇಡೀ ವಿಶ್ವಕ್ಕೆ ತನ್ನ ಸೇನೆಯ ಶಕ್ತಿ ಹಾಗೂ ಸಾಮರ್ಥ್ಯವನ್ನು ತೋರಿಸಿಕೊಟ್ಟಿತ್ತು. ಪಾಕಿಸ್ತಾನ ಆಶ್ರಯದಲ್ಲಿ ನಡೆಯುತ್ತಿದ್ದ ಉಗ್ರರಿಗೆ ಈ ದಾಳಿಯು ಬೆಚ್ಚಿ ಬೀಳುವಂತೆ ಮಾಡಿತ್ತು. ಅತ್ಯಂತ ಅಪಾಯಕಾರಿ ಕಾರ್ಯಾಚರಣೆಯನ್ನು ಸೇನೆ ಯಶಸ್ವಿಯಾಗಿ ನಡೆಸಿ, ಉಗ್ರರಿಗೆ ಸಿಂಹಸ್ವಪ್ನವಾಗಿ ಕಾಡಿತ್ತು.