ಮಂಗಳೂರು, ಸೆ29(SS): ಮಾತೆ ಮೇರಿಯ ಮೂರ್ತಿಯನ್ನಿಟ್ಟು ಕ್ರೈಸ್ತರು ಆರಾಧನೆ ಮಾಡುತ್ತಿದ್ದ ಸ್ಥಳಕ್ಕೆ ದುಷ್ಕರ್ಮಿಗಳು ದಾಳಿ ಮಾಡಿ ಕೊರಗಜ್ಜ ದೈವದ ಮೂರ್ತಿ ಇರಿಸಿದ ಘಟನೆ ಬಂಟ್ವಾಳ ತಾಲೂಕಿನ ಕುಂಟ್ರಕಳ ಎಂಬಲ್ಲಿ ನಡೆದಿದೆ. ಈ ಕೃತ್ಯವನ್ನು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಖಂಡಿಸಿದ್ದಾರೆ.
ಕಳೆದ 45 ವರ್ಷಗಳಿಂದ ಕ್ರೈಸ್ತರು ಕುಂಟ್ರಕಳದಲ್ಲಿ ಮಾತೆ ಮೇರಿಯ ಮೂರ್ತಿಯನ್ನಿಟ್ಟು ಆರಾಧನೆ ಮಾಡುತ್ತಿದ್ದರು. ಮೇರಿಯ ಮೂರ್ತಿಯನ್ನಿಟ್ಟ ಸ್ಥಳ ಸರ್ಕಾರಿ ಜಾಗವಾದ ಕಾರಣ ಅಲ್ಲಿ ಮೇರಿ ಆರಾಧನೆ ಬಗ್ಗೆ ಇತ್ತೀಚೆಗೆ ಹಿಂದೂ ಸಂಘಟನೆಯ ಕಾರ್ಯಕರ್ತರು ಆಕ್ಷೇಪ ಎತ್ತಿದ್ದರು ಎಂದು ಹೇಳಲಾಗಿದೆ. ಮಾತ್ರವಲ್ಲ ಸೆ.28ರ ಮಧ್ಯರಾತ್ರಿ ಏಕಾಏಕಿ ಸ್ಥಳಕ್ಕೆ ನುಗ್ಗಿದ ಕಿಡಿಗೇಡಿಗಳ ತಂಡ ಮೇರಿ ಮೂರ್ತಿ ಇದ್ದ ಪ್ರದೇಶದಲ್ಲಿ ಕೊರಗಜ್ಜ ದೈವದ ಮೂರ್ತಿ ಇರಿಸಿದ್ದು, ಸುತ್ತಲೂ ಕೇಸರಿ ಬಂಟಿಂಗ್ಸ್ ಕಟ್ಟಿದ್ದಾರೆ.
ಈ ಕೃತ್ಯವೆಸಗಿದವರ ವಿರುದ್ಧ ಐವನ್ ಡಿಸೋಜ ಗರಂ ಆಗಿದ್ದಾರೆ. ಗುಂಟಲ್ಕಟ್ಟೆ ವಿಜಯಡ್ಕ ಚರ್ಚ್ನ ವೆಲಂಕಣಿ ಮಾತೆಯ ಗ್ರೋಟ್ಟೊವನ್ನು ಕಿಡಿಗೇಡಿಗಳು ಧ್ವಂಸ ಮಾಡಿದ ಕೃತ್ಯವನ್ನು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಖಂಡಿಸಿದ್ದು ಮಾತ್ರವಲ್ಲದೆ, ಕೃತ್ಯದ ಹಿಂದಿನ ದುರುದ್ದೇಶದ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಹೇಳಿದ್ದಾರೆ.
ಜೊತೆಗ ಧ್ವಂಸಗೊಳಿಸಿದ ಗ್ರೋಟ್ಟೊವನ್ನು ಪುನರ್ ನಿರ್ಮಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗೆ ಐವನ್ ಡಿಸೋಜ ಮನವಿ ಮಾಡಿದ್ದಾರೆ.
ಇದೀಗ ಘಟನೆಯ ಬಗ್ಗೆ ಈಗ ತನಿಖೆ ಆರಂಭವಾಗಿದ್ದು, ಕೃತ್ಯ ಎಸಗಿದ ಎಲ್ಲಾ ದುಷ್ಕರ್ಮಿಗಳ ಶೋಧ ಆರಂಭವಾಗಿದೆ.