ಬಂಟ್ವಾಳ, ಸೆ29(SS): ಮೇರಿ ಮಾತೆಯ ಗ್ರೋಟ್ಟೊವನ್ನು ಕಿಡಿಗೇಡಿಗಳು ಧ್ವಂಸ ಮಾಡಿದ ಘಟನೆ ವಿಟ್ಲ ಪೊಲೀಸ್ ಠಾಣೆ ವ್ಯಾಪ್ತಿಯ ಕೊಳ್ನಾಡು ಗ್ರಾಮದ ಕುಳಾಲು ಕುಂಟ್ರಕಳ ಎಂಬಲ್ಲಿ ನಡೆದಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಂಟ್ವಾಳ ತಾಲೂಕಿನ ವಿಟ್ಲ ಠಾಣಾ ವ್ಯಾಪ್ತಿಯ ಕೊಳ್ನಾಡು ಗ್ರಾಮದ ಕುಳಾಲು ಎಂಬಲ್ಲಿ 1970ರಲ್ಲಿ ಕ್ರೈಸ್ತ ಧರ್ಮಗುರುಗಳಿಂದ ಮೇರಿ ಮಾತೆಯ ಗುಡಿಯೊಂದು ನಿರ್ಮಾಣವಾಗಿತ್ತು. 1970ಲ್ಲಿ ನಿರ್ಮಾಣವಾಗಿದ್ದ ಈ ಗುಡಿ ಶಿಥಿಲವಾಗಿತ್ತು. ಈ ಹಿನ್ನೆಲೆ ಸ್ಥಳೀಯ ಕ್ರೈಸ್ತರು ಸೇರಿದಂತೆ ಧರ್ಮಗುರುಗಳು ಮತ್ತೆ ಮೇರಿ ಮಾತೆಯ ಗುಡಿಯನ್ನು ಪುನರ್ ನಿರ್ಮಿಸಲು ಮಾತುಕತೆ ನಡೆಸಿದ್ದರು. ಮಾತ್ರವಲ್ಲ, ಹಿಂದೆ ಇದ್ದ ಜಾಗದಲ್ಲಿ ಕೆಲಸ ಆರಂಭಿಸಿದ್ದರು. ಮೇರಿ ಮಾತೆಯ ಗುಡಿಗೆ ಕಾಂಕ್ರೀಟಿಕರಣ ಮಾಡಲು ಯೋಜನೆ ಆರಂಭವಾಗುತ್ತಿದ್ದಂತೆ, ಕೆಲ ಕಿಡಿಗೇಡಿಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದು ಮಾತ್ರವಲ್ಲದೇ, ರಾತ್ರೋರಾತ್ರಿ ಮೇರಿ ಮಾತೆಯ ಗುಡಿ ಧ್ವಂಸ ಮಾಡಿದ್ದರು.
ಕಿಡಿಗೇಡಿಗಳು ಮೇರಿ ಮಾತೆಯ ಗುಡಿ ಇದ್ದ ಜಾಗದಲ್ಲಿ ಕೇಸರಿ ಧ್ವಜ ಹಾರಿಸಿ ಕೋಮುಗಲಭೆ ಭಾವನೆಯನ್ನು ಕೆರಳಿಸುವ ಹುನ್ನಾರ ನಡೆಸಿದ್ದರು.ಮಾತ್ರವಲ್ಲ, ಗ್ರೋಟ್ಟೊ ಕೆಡವಿ ಆ ಜಾಗದಲ್ಲಿ ಕೊರಗಜ್ಜನ ಕಟ್ಟೆ ನಿರ್ಮಿಸಿ ಸ್ಥಳದಲ್ಲಿ ಅಶಾಂತಿಯ ವಾತಾವರಣ ನಿರ್ಮಾಣ ಮಾಡಿದ್ದರು.
ಗ್ರೋಟ್ಟೊ ಹಾನಿ ಬಗ್ಗೆ ಡೇವಿಡ್ ಡಿಸೋಜ, ಚಾರ್ಲಿ ವೇಗಸ್ ಎಂಬವರು ನೀಡಿರುವ ದೂರಿನಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರವಿಕಾಂತೇ ಗೌಡ, ಬಂಟ್ವಾಳ ಸಹಾಯಕ ಪೊಲೀಸ್ ಅಧೀಕ್ಷಕ ರಿಷಿಕೇಶ್ ಸೊನಾವಣೆ, ಬಂಟ್ವಾಳ ಪೊಲೀಸ್ ವೃತ್ತ ನಿರೀಕ್ಷಕ ಟಿ.ಡಿ.ನಾಗರಾಜ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಾತ್ರವಲ್ಲ, ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ, ಕಂದಾಯ ನಿರೀಕ್ಷಕರಾದ ದಿವಾಕರ ಮುಗುಳಿಯ, ಗ್ರಾಮ ಕರಣಿಕ ಅನಿಲ್, ಕಂದಾಯ ನಿರೀಕ್ಷಕರ ಕಚೇರಿಯ ಗ್ರಾಮ ಸಹಾಯಕ ಗಿರೀಶ್ ಮತ್ತಿತರರು ಸ್ಥಳಕ್ಕಾಗಮಿಸಿ ಜಾಗದ ಒಡೆತನದ ಬಗ್ಗೆಯೂ ಪರಿಶೀಲನೆ ನಡೆಸಿದ್ದಾರೆ.