ಬೆಳ್ತಂಗಡಿ, ಸೆ 28(SM): ಪತ್ರಕರ್ತನ ಹೆಸರು ಬಳಸಿಕೊಂಡು ಜನಸಾಮಾನ್ಯರಿಗೆ ವಂಚನೆ ನಡೆಸುತ್ತಿದ್ದ ಆರೋಪಿಯೋರ್ವನನ್ನು ಬಂಧಿಸಿರುವ ಪೊಲೀಸರು ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಸತೀಶ್ ಪೆರ್ಲ ಎಂಬಾತ ಬಂಧಿತ ಆರೋಪಿ.
ಈತನಿಗೆ ಕೋರ್ಟ್ ನ್ಯಾಯಾಂಗ ಬಂಧನವಿಧಿಸಿದೆ. ಈತ ತನ್ನನ್ನು ಪತ್ರಕರ್ತನೆಂದು ಬಿಂಬಿಸಿಕೊಂಡು ಹಲವು ಮಂದಿಗೆ ಬೆದರಿಸಿ ಹಣ ಕೀಳುತ್ತಿದ್ದ. ಸಾರ್ವಜನಿಕರು ಈತನ ಉಪಟಳದಿಂದಾಗಿ ರೋಸಿ ಹೋಗಿದ್ದರು.
ಹೀಗಿರುವಾಗ ನೆರಿಯಗ್ರಾಮದ ಮನೆಯೊಂದರ ಮುಂದೆ ರಾಶಿ ಹಾಕಿದ್ದ ಮರಳಿಗೆ ಹಣ ನೀಡಬೇಕು. ಇಲ್ಲದಿದ್ದರೆ ಮಾಧ್ಯಮಗಳಲ್ಲಿ ವರದಿ ಪ್ರಕಟಿಸುವುದಾಗಿ ಬೆದರಿಕೆಯೊಡಿದ್ದ ಎನ್ನಲಾಗಿದೆ. ಮನೆ ಮಂದಿಯಲ್ಲಿ ೫ ಸಾವಿರ ರೂ.ಗಳಿಗೆ ಬೇಡಿಕೆಯಿಟ್ಟಿದ್ದ ಎನ್ನಲಾಗಿದೆ. ಅವರು ೨ ಸಾವಿರರೂ ನೀಡಿದ್ದರಲ್ಲದೆ ಧರ್ಮಸ್ಥಳ ಠಾಣೆಗೆ ದೂರು ಕೂಡ ನೀಡಿದ್ದಾರೆ. ವಂಚನೆಗೊಳಗಾದರ ದೂರಿನಂತೆ ಆರೋಪಿ ಸತೀಶ್ನನ್ನು ಪೋಲಿಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಸದ್ಯ ಆರೋಪಿ ನ್ಯಾಯಾಂಗ ಬಂಧನದಲ್ಲಿದ್ದಾನೆ.