ಕಾರ್ಕಳ, ಮೇ.19 (DaijiworldNews/PY): ಕಾರ್ಕಳ ತಾಲೂಕು ವ್ಯಾಪ್ತಿಯಲ್ಲಿ ಕೊರೊನಾ ಕರ್ಫ್ಯೂ ಉಲ್ಲಂಘಿಸಿ ಕೆಲವು ವ್ಯಾಪಾರಸ್ಥರಯ ತಮ್ಮ ಅಂಗಡಿಗಳನ್ನು ತೆರೆದು ವ್ಯಾಪಾರ ನಡೆಸುತ್ತಿದ್ದು ಇದರಿಂದ ಪೊಲೀಸರು ಬಿಗು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.
ಮೇ 18ರ ಬುಧವಾರ ಮಧ್ಯಾಹ್ನ 2 ಗಂಟೆಯ ಸುಮಾರಿಗೆ ಕುಕ್ಕುಂದೂರು ಜೋಡುರಸ್ತೆ ನಡಿಮಾರ್ ಪೆಟ್ರೋಲ್ ಬಂಕ್ ಬಳಿ ಮಹಾಲಕ್ಷ್ಮೀ ಸಿರಾಮಿಕ್ಸ್ ಅಂಗಡಿಯನ್ನು ತೆರೆದು ವ್ಯಾಪಾರ ನಡೆಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂಗಡಿಯ ಮಾಲಕ ಹರಿರಾಮ್ ಎಂಬವರ ವಿರುದ್ಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೇ 18ರ ಬುಧವಾರ ಸಂಜೆ 4 ಗಂಟೆಯ ಸುಮಾರಿಗೆ ಕಾರ್ಕಳ ಮಿಯ್ಯಾರು ಗ್ರಾಮದ ಕಾರೋಲ್ ಗುಡ್ಡೆ ಎಂಬಲ್ಲಿ ಪರವಾನಿಗೆ ರಹಿತವಾಗಿ ಸಾರ್ವಜನಿಕರಿಗೆ ಮದ್ಯ ಮಾರಾಟ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಕಲ್ ಕೊರೆಯ (28) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ 180 ಲೀ. ನ ಒಟ್ಟು 17 ಮದ್ಯ ತುಂಬಿದ ಸ್ಯಾಚೆಟ್ಗಳನ್ನು ಹಾಗೂ 3,200 ರೂ. ನಗದನ್ನು ಪೊಲೀಸರು ವಶಪಡಿಸಿಕೊಂದ್ದು, ಈ ಬಗ್ಗೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೇ 18ರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಕಾರ್ಕಳ ನಗರದ ತೆಳ್ಳಾರು ರಸ್ತೆಯಲ್ಲಿ ಕಾರುಣ್ಯ ಎಂಟರ್ಪ್ರೈಸಸ್ನ ಸೋಲಾರ್ ಇನ್ ವರ್ಟರ್ ಸರ್ವಿಸ್ ಅಂಗಡಿಯನ್ನು ತೆರದು ವ್ಯಾಪಾರ ನಡೆಸುತ್ತಿದ್ದ ತೆಳ್ಳಾರು 2ನೇ ಅಡ್ಡ ರಸ್ತೆಯ ಸಾಂತ್ರಬೆಟ್ಟು ನಿವಾಸಿ ಗಣೇಶ್ ದೇವಾಡಿಗ (35)ನ ವಿರುದ್ಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಲೂಕು ವ್ಯಾಪ್ತಿಯಲ್ಲಿ ಹೂವಿನ, ಸೆಲೂನ್ , ಟೈಲರ್, ಇಸ್ತ್ರೀ ಅಂಗಡಿಗಳನ್ನು ತೆರೆದು ವ್ಯಾಪಾರ ನಡೆಸುತ್ತಿರುವುದು ಗಮನಕ್ಕೆ ಬಂದಿದ್ದು, ಕೊರೊನಾ ಕರ್ಫ್ಯೂ ಕಾನೂನಿನಡಿಯಲ್ಲಿ ಇವುಗಳಿಗೆ ಅವಕಾಶ ಇರುವುದಿಲ್ಲ. ಜಿಲ್ಲಾಡಳಿತದ ಅದೇಶವನ್ನು ಸಂಪೂರ್ಣ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ವ್ಯಾಪಾರಿ ವರ್ತಕರು ಸಹಕರಿಸಬೇಕಾಗಿ ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.