ಕಾಸರಗೋಡು, ಸೆ 28(SM): ಕಳವಿಗೆ ಯತ್ನಿಸುತ್ತಿದ್ದ ಇಬ್ಬರನ್ನು ಬದಿಯಡ್ಕ ಠಾಣಾ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಬಂಧಿತರನ್ನು ಉದಿನೂರು ಮಚ್ಚಿಕಾಡ್ ನ ಟಿ.ಆರ್. ಮಣಿ(50) ಮತ್ತು ಬೇಳ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಮೂಲತಃ ಕೊಲ್ಲಂ ನಿವಾಸಿ ರಾಜೀವನ್(32) ಎಂದು ಗುರುತಿಸಲಾಗಿದೆ.
ಆರೋಪಿಗಳಿಂದ ಓಮ್ನಿ ಕಾರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಪ್ರಕರಣದಲ್ಲಿ ಓರ್ವ ಪರಾರಿಯಾಗಿದ್ದಾನೆ. ವಿದ್ಯಾಗಿರಿಯ ಶ್ರೀಧರ ಶೆಟ್ಟಿ ಎಂಬಾತ ಪರಾರಿಯಾಗಿದ್ದಾನೆ.
ಶುಕ್ರವಾರ ಮುಂಜಾನೆ ನೀರ್ಚಾಲು ಕಿಳಿಂಗಾರು ರಸ್ತೆಯ ಕಟ್ಟಡವೊಂದರಲ್ಲಿ, ಈ ಹಿಂದೆ ಶ್ರೀಗಂಧ ಕಾರ್ಖಾನೆ ಗೋದಾಮು ಕಾರ್ಯಾಚರಿಸುತ್ತಿದ್ದ ಕಟ್ಟಡದಲ್ಲಿ ಆರೋಪಿಗಳು ಕಳವಿಗೆ ಯತ್ನಿಸುತ್ತಿದ್ದರು. ಮುಂಜಾನೆ ಎರಡು ಗಂಟೆಗೆ ಸ್ಥಳೀಯರು ಗಮನಿಸಿ ಬದಿಯಡ್ಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಇಬ್ಬರನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಮಣಿ ವಿರುದ್ಧ ಚಿತ್ತಾರಿಕ್ಕಲ್, ಕಾಞ೦ಗಾಡ್ ಮೊದಲಾದೆಡೆ ನಾಲ್ಕು ಕಳವು ಪ್ರಕರಣಗಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ರಾಜೀವನ್ ವಿರುದ್ಧ ಹಲವು ಪ್ರಕರಣಗಳಿವೆ ಎನ್ನಲಾಗಿದೆ. ಪರಾರಿಯಾಗಿರುವ ಶ್ರೀಧರ್ ಶೆಟ್ಟಿ ವಾಹನ ಕಳವು ಸೇರಿದಂತೆ ಹಲವು ಪ್ರಕರಣಗಳ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ. ವಾಹನ ಕಳವು ಪ್ರಕರಣಕ್ಕೆ ಸಂಬಂಧಪಟ್ಟಂತೆ ಜೈಲು ಸೇರಿದ್ದ ಈತ ಕೆಲ ವರ್ಷಗಳ ಹಿಂದೆ ಜೈಲಿನಿಂದ ಹಾರಿ ಪರಾರಿಯಾಗಿದ್ದ ಎನ್ನಲಾಗಿದೆ.
ಬದಿಯಡ್ಕ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುನ್ನಡೆಸಿದ್ದಾರೆ.