ಉಡುಪಿ, ಸೆ28(SS): ಸೌದಿ ಅರೇಬಿಯಾದಲ್ಲಿ ಸಹೋದ್ಯೋಗಿಯ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದ ಉಡುಪಿಯ ಶಿರ್ವ ಮೂಲದ ನರ್ಸ್ ಹೆಝಲ್ ಪಾರ್ಥೀವ ಶರೀರವನ್ನು ಇಂದು ಹುಟ್ಟೂರಿನಲ್ಲಿ ದಫನ ಮಾಡಲಾಯಿತು.
ಸುಮಾರು ಎಪ್ಪತ್ತು ದಿನಗಳ ಬಳಿಕ ಹೆಝಲ್ ಪಾರ್ಥೀವ ಶರೀರ ನಿನ್ನೆ ತವರಿಗೆ ಬಂದಿತ್ತು. ನಿನ್ನೆ ಗಲ್ಫ್ ಏರ್ ವೇಸ್ ಕಾರ್ಗೋ ಮೂಲಕ ಪಾರ್ಥೀವ ಶರೀರ ಬೆಂಗಳೂರಿಗೆ ಬಂದು ಅಲ್ಲಿಂದ ಮನೆಗೆ ತರಲಾಯಿತು. ಸೌದಿಯ ಅಲ್ ಮಿಕ್ವಾ ಆಸ್ಪತ್ರೆಯಲ್ಲಿ ಜುಲೈ 19 ರಂದು ಸಂಶಯಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದ ಹೆಝಲ್,ಡೆತ್ ನೋಟ್ ಬರೆದಿಟ್ಟಿದ್ದರು. ಇದರಲ್ಲಿ ತನ್ನ ಸಹೋದ್ಯೋಗಿಯೊಬ್ಬ ಕಿರುಕುಳ ನೀಡಿದ್ದಕ್ಕೆ ಆತ್ಮಹತ್ಯೆ ಮಾಡುತ್ತಿರುವುದಾಗಿಯೂ ಪ್ರಸ್ತಾಪಿಸಿದ್ದರು.
ಸೌದಿಯಲ್ಲಿ ಕಠಿಣ ಕಾನೂನು ಇರುವ ಕಾರಣದಿಂದ ಪೊಲೀಸರು ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸಿ, ಕಿರುಕುಳ ನೀಡಿದ್ದ ವ್ಯಕ್ತಿಯನ್ನು ಬಂಧಿಸಿದ್ದರು.
ಮನೆಯ ಮಗಳು ದೂರದ ಊರಲ್ಲಿ ಯಾರದೋ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ವಿಷಯ ಬಂಧು ಮಿತ್ರರ ದುಃಖವನ್ನು ಇಮ್ಮಡಿಗೊಳಿಸಿತ್ತು. ಮಾತ್ರವಲ್ಲ, ಮೃತಪಟ್ಟು ಎಪ್ಪತ್ತು ದಿನಗಳಾದರೂ ಪಾರ್ಥೀವ ಶರೀರದ ದರ್ಶನ ಭಾಗ್ಯವೂ ಕುಟುಂಬಸ್ಥರಿಗೆ ಸಿಕ್ಕಿರಲಿಲ್ಲ. ಹೀಗಾಗಿ ಇವತ್ತು ಪಾರ್ಥೀವ ಶರೀರ ಬಂದಾಗ ಇಡೀ ಊರೇ ಹೆಝಲ್ ಗಾಗಿ ಕಂಬನಿ ಮಿಡಿಯಿತು.
ಮನೆಯಲ್ಲಿ ಬಂಧುಮಿತ್ರರು ಅಂತಿಮ ದರ್ಶನ ಮಾಡಿದ ಬಳಿಕ ಶಿರ್ವದ ಆರೋಗ್ಯ ಮಾತಾ ದೇವಾಲಯದಲ್ಲಿ ವಿಶೇಷ ಪೂಜೆ ನಡೆದು ಸಂಪ್ರದಾಯಬದ್ಧವಾಗಿ ದಫನಕ್ರಿಯೆ ನಡೆಯಿತು.