ಸುಪ್ರೀತಾ ಸಾಲ್ಯಾನ್
ಕಲಾಭೂಮಿಯಲ್ಲಿ ನಟಿಸಿದ ಮೊದಲ ಚಿತ್ರದಿಂದಲೇ ಎಲ್ಲರ ಮೆಚ್ಚುಗೆಯನ್ನು ಪಡೆದು ಭೇಷ್ ಅನಿಸಿಕೊಂಡಿರುವ ಕಲಾವಿದ. ಕೇವಲ ನಟನೆ ಮಾತ್ರವಲ್ಲ, ನಟನೆಯ ಜೊತೆಗೆ ಕ್ರೀಡೆ, ನೃತ್ಯ, ಮಾಡೆಲಿಂಗ್ ವಲಯದಲ್ಲೂ ಶೈನ್ ಆಗಿರುವ ಅದ್ಭುತ ಪ್ರತಿಭೆ. ಅಂದ ಹಾಗೆ ಕಲಾ ಜಗತ್ತಿನಲ್ಲಿ ಸತತ ಶ್ರಮದ ನಂತರ ಯಶಸ್ಸು ಕಾಣುತ್ತಿರುವ ಈ ಪ್ರತಿಭೆಯ ಹೆಸರು ಮನೋಜ್ ಪುತ್ತೂರು.
ನೃತ್ಯ ಕ್ಷೇತ್ರದಲ್ಲಿ ಇವರಿಗೆ ಹೆಚ್ಚಿನ ತುಡಿತ. ಕಿರಿಯ ವಯಸ್ಸಿನಿಂದಲೇ ನೃತ್ಯದಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡಿದ್ದ ಇವರು ಉತ್ತಮ ನೃತ್ಯಗಾರರೂ ಹೌದು. ಕರ್ನಾಟಕದಾದ್ಯಂತ ಹಲವಾರು ವೇದಿಕೆಗಳಲ್ಲಿ ನೃತ್ಯ ಕಾರ್ಯಕ್ರಮವನ್ನು ನೀಡಿರುವ ಇವರು ಕನ್ನಡ ಚಿತ್ರ ರಂಗದ ಯಶ್, ದಿಗಂತ್, ತರುಣ್, ಅಜಯ್, ರಮೇಶ್ ಹೀಗೆ ಅನೇಕ ತಾರೆಗಳು ನಟಿಸಿರುವ ಚಿತ್ರಗಳ ಹಾಡುಗಳಲ್ಲಿ ಹೆಜ್ಜೆ ಹಾಕಿದ್ದಾರೆ. ಗುರುಗಳಾದ ಮೋಹನ್ ಅವರ ಗರಡಿಯಲ್ಲಿ ನೃತ್ಯಭ್ಯಾಸವನ್ನು ಕಲಿತುಕೊಂಡ ಇವರು ಸೆಮಿಕ್ಲಾಸಿಕಲ್ ಹಾಗೂ ವೆಸ್ಟರ್ನ್ ಶೈಲಿಯ ನೃತ್ಯವನ್ನು ಸಲೀಸಾಗಿ ನಿಭಾಯಿಸುವುದರಲ್ಲಿ ಪ್ರವೀಣರು. ಮಂಗಳೂರಿನಲ್ಲಿ ನಡೆದ ಡ್ಯಾನ್ಸ್ ವೇರಿಯರ್ಸ್ ಎಂಬ ರಿಯಾಲಿಟಿ ಶೋನಲ್ಲಿ ಅಪೂರ್ವವಾದ ನೃತ್ಯ ಪ್ರದರ್ಶಿಸಿ ಮೂರನೇ ಸ್ಥಾನವನ್ನು ತನ್ನದಾಗಿಸಿಕೊಂಡಿದ್ದಾರೆ.
ಮೈಸೂರಿನ ರಂಗಾಯಣ ಶಿಕ್ಷಣ ಸಂಸ್ಥೆಯಲ್ಲಿ ಕಲಾ ಜಗತ್ತಿನ ಹೆಚ್ಚಿನ ಜ್ಞಾನವನ್ನು ಪಡೆದ ಇವರು ರಂಗಭೂಮಿಯಲ್ಲೂ ಸೈ ಎನಿಸಿಕೊಂಡಿದ್ದಾರೆ. ಚಿಕ್ಕ ದೇವ ಭಾಮ, ವಸಂತ ಯಾಮಿನಿ ಸ್ವಪ್ನ, ಚಮತ್ಕರಾಂ ಹೀಗೆ ಅನೇಕ ನಾಟಕಗಳಲ್ಲಿ ತಮ್ಮ ಮನೋಜ್ಞ ಅಭಿನಯದ ಮೂಲಕ ಕಲಾ ರಸಿಕರನ್ನು ಮೋಡಿ ಮಾಡಿದ್ದಾರೆ. ಗುರುಗಳಾದ ತಲಕಾಡು ಗುರುರಾಜ್ ಅವರ ಸ್ಫೂರ್ತಿಯಿಂದ ಕನ್ನಡ ಹಾಗೂ ತುಳುವಿನ ಅನೇಕ ನಾಟಕಗಳಲ್ಲಿ ಅಭಿನಯಿಸಿ ರಂಗಭೂಮಿಯಲ್ಲಿ ಹೆಸರು ಮಾಡಿದ್ದಾರೆ.
ಎಳೆಯ ವಯಸ್ಸಿನಿಂದಲೇ ನಟನಾಗಬೇಕೆಂಬ ಕನಸು ಕಟ್ಟಿಕೊಂಡಿದ್ದ ಇವರು ಕನ್ನಡದ ರಿಶಬ್ ಶೆಟ್ಟಿ ನಿರ್ದೇಶನದ ರಿಕ್ಕಿ ಚಿತ್ರದಲ್ಲಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜಯರಾಜ್ ನಿರ್ದೇಶನದ ರಂಗೋಳು ಚಿತ್ರದಲ್ಲಿಯೂ ನಟಿಸಿದ್ದು, ದಾಮೋಧರ ಬಂಗೇರ ಅವರ ಬಯ್ಯಮಲ್ಲಿಗೆ ಎಂಬ ಟೆಲೆಫಿಂನಲ್ಲಿ ಲೀಡ್ ರೋಲ್ನಲ್ಲಿ ನಟಿಸಿ ಶೈನ್ ಆಗಿದ್ದಾರೆ. ನಟ ಸೃಜನ್ ಲೋಕೆಶ್ ಅವರ ಹ್ಯಾಪಿಜರ್ನಿ ಚಿತ್ರದಲ್ಲಿ ನೆಗೆಟಿವ್ ರೋಲ್ನಲ್ಲಿ ನಟಿಸಿದ್ದು ಮನೋಜ್ಞ ಅಭಿನಯದಿಂದ ಪ್ರಶಂಸೆ ಪಡೆದುಕೊಂಡಿದ್ದಾರೆ. ಮಾತ್ರವಲ್ಲ ಪರಸಂಗ, ಕುಮಾರಿ 21ಎಫ್ ಸೇರಿದಂತೆ ಕನ್ನಡದ ಅನೇಕ ಚಿತ್ರಗಳಲ್ಲಿ ಛಾಪು ಮೂಡಿಸಿದ್ದಾರೆ.
ಕರಾವಳಿಯ ಕೊಸ್ಟಲ್ವುಡ್ನಲ್ಲಿಯೂ ಛಾಪು ಮೂಡಿಸುತ್ತಿರುವ ಮನೋಜ್ ತುಳುವಿನ ಪವಿತ್ರ, ಕುಡ್ಲಕೆಫೆ ಚಿತ್ರದಲ್ಲಿ ನವೀನ್ ಡಿ ಪಡೀಲ್ನಂತಹ ಖ್ಯಾತ ಕಲಾವಿದರ ಜೊತೆ ನಟಿಸಿದ್ದಾರೆ. ಕೇವಲ ನಟನೆ ಮಾತ್ರವಲ್ಲದೆ ತುಳುವಿನ ಕೆಲ ಸಿನಿಮಾಗಳಲ್ಲಿ ನಿರ್ದೇಶಕರಾಗಿ ಕೂಡ ಕೆಲಸ ನಿರ್ವಹಿಸಿದ್ದಾರೆ. ಮನೋಜ್ ಅವರ ಮನೋಜ್ಞ ಅಭಿನಯಕ್ಕೆ ತೆಲುಗಿನಿಂದಲೂ ಆಫರ್ ಬರುತ್ತಿದ್ದು, ನಟಿಸಿರುವ ತೆಲುಗು ಚಿತ್ರವೊಂದು ಮುಂಬರುವ ದಿನಗಳಲ್ಲಿ ತೆರೆ ಕಾಣಲಿದೆ.
ಕ್ರೀಡಾ ಕ್ಷೇತ್ರದಲ್ಲೂ ಪಳಗಿರುವ ಇವರು ಉತ್ತಮ ಕಬ್ಬಡಿ ಆಟಗಾರನೂ ಹೌದು. ಮಾಡಲಿಂಗ್ನಲ್ಲೂ ಗುರುತಿಸಿಕೊಂಡಿದ್ದು ತಮ್ಮ ಅದ್ಭುತ ಪ್ರತಿಭೆಯ ಮೂಲಕ ತಾಲ್ಲೂಕು, ರಾಜ್ಯ, ಜಿಲ್ಲಾ ಮಟ್ಟದಲ್ಲಿ ಅನೇಕ ಪುರಸ್ಕಾರಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಮೂಲತಃ ಪುತ್ತೂರಿನ ಸಮೀಪದ ನೇರಳೆಕಟ್ಟೆ ಚಂದ್ರಶೇಖರ ಮತ್ತು ಲಲಿತ ದಂಪತಿಗಳ ಪುತ್ರನಾದ ಇವರು ಸದ್ಯ ಬೆಂಗಳೂರಿನಲ್ಲಿದ್ದುಕೊಂಡು ಕಲಾವಿದನಾಗಿಯೇ ವೃತ್ತಿ ಬದುಕನ್ನು ಆರಂಭಿಸಿದ್ದಾರೆ. ಸಿನಿಮಾ ಕ್ಷೇತ್ರದಲ್ಲಿಯೇ ಇದ್ದು ಸಾಧಿಸಬೇಕೆನ್ನುವ ಇವರಿಗೆ ತುಳು, ತೆಲುಗು ಮತ್ತು ಕನ್ನಡ ಚಿತ್ರರಂಗದಿಂದ ಅವಕಾಶಗಳೂ ಹೆಚ್ಚಾಗುತ್ತಿದೆ.