ಮಂಗಳೂರು, ಸೆ28(SS): ಶಬರಿಮಲೆ ದೇಗುಲದಲ್ಲಿ ಪೂಜೆ ಮಾಡಲು ಪುರುಷರಿಗೆ ಎಷ್ಟು ಹಕ್ಕಿದೆಯೋ ಅಷ್ಟೇ ಹಕ್ಕು ಮಹಿಳೆಯರಿಗೂ ಇದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಮಾತ್ರವಲ್ಲ, ಶಬರಿಮಲೆ ದೇಗುಲಕ್ಕೆ ಮಹಿಳೆಯರಿಗೂ ಪ್ರವೇಶಿಸಲು ಸುಪ್ರೀಂ ಕೋರ್ಟ್ ಅವಕಾಶ ಕಲ್ಪಿಸಿದೆ. ಈ ವಿಚಾರವಾಗಿ ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಪ್ರತಿಕ್ರಿಯಿಸಿದ್ದಾರೆ.
ದಾಯ್ಜಿವರ್ಲ್ಡ್ ವಾಹಿನಿಯ ಜೊತೆ ಮಾತನಾಡಿದ ಅವರು, ಪ್ರತಿಯೊಂದು ಧರ್ಮದಲ್ಲೂ ಧಾರ್ಮಿಕ ನಂಬಿಕೆಗಳಿವೆ. ಅದನ್ನು ಪಾಲಿಸುವವರು ಪಾಲಿಸುತ್ತಾರೆ. ಆ ನಂಬಿಕೆ ಅವರುಗಳ ವೈಯಕ್ತಿಕ ಆಯ್ಕೆಗೆ ಬಿಟ್ಟ ವಿಚಾರ. ಅಂತಹ ಧಾರ್ಮಿಕ ಕಟ್ಟುಪಾಡುಗಳನ್ನು ನಿರ್ಬಂಧಿಸುವ ಅಧಿಕಾರ ಜಾತ್ಯಾತೀತ ಭಾರತದ ಸಂವಿಧಾನ ಯಾರಿಗೂ ನೀಡಿಲ್ಲ. ಹೀಗಿದ್ದರೂ ಕಾನೂನು, ಕೋರ್ಟ್ ಧಾರ್ಮಿಕ ಕಟ್ಟುಪಾಡುಗಳಿಗೆ ಸಂಬಂಧಿಸಿದಂತೆ ಅನಗತ್ಯ ನಿಯಮಗಳನ್ನು ರೂಪಿಸಿ ವಿನಾ ಕಾರಣ ಗೊಂದಲ ಸೃಷ್ಟಿಸಿ ಹಾಕುತ್ತಿರುವುದು ತೀರಾ ಖಂಡನೀಯ ಎಂದು ಹೇಳಿದರು.
ನಲ್ವತ್ತೊಂದು ದಿನಗಳ ಕಠಿಣ ಧಾರ್ವಿುಕ ವಿಧಿವಿಧಾನ ಹಾಗೂ ಹರಕೆ ಪೂರೈಸಲು ಮಹಿಳೆಯರಿಗೆ ಸಾಧ್ಯವಾಗುವುದಿಲ್ಲ. ಹೀಗಿದ್ದರೂ ಧಾರ್ಮಿಕ ಕಟ್ಟುಪಾಡುಗಳಿಗೆ ಸಂಬಂಧಿಸಿದಂತೆ ಅನಗತ್ಯ ನಿಯಮಗಳನ್ನು ರೂಪಿಸಿದೆ. ಕಾನೂನುನನ್ನು ಮೀರಿ ನಡೆಯುವ ಹಕ್ಕು ಯಾರಿಗೂ ಇಲ್ಲ. ಹಾಗಾಗಿ ಕೋರ್ಟ್ ನೀಡಿರುವ ತೀರ್ಪನ್ನು ನಾವು ಇಷ್ಟ ಇಲ್ಲದಿದ್ದರೂ ಒಪ್ಪಿಕೊಳ್ಳಲೇಬೇಕು. ಎಲ್ಲವನ್ನು ಮೌನದಿಂದ ಸ್ವಾಗತಿಸೋಣ. ದೇವರ ಇಚ್ಚೆ ಮುಂದೆ ನಡೆಯಲಿದೆ ಎಂದು ತಿಳಿಸಿದರು.
ಧಾರ್ಮಿಕ ಕಟ್ಟುಪಾಡುಗಳಿಗೆ ಕಾನೂನು ಮಧ್ಯ ಪ್ರವೇಶಿಸಿ ಈ ರೀತಿ ನಿಯಮ ತರುವುದು ಸರಿಯಲ್ಲ. ಇದರಿಂದ ಜನರ ಭಾವನೆಗಳಿಗೆ ನೋವಾಗುತ್ತದೆ. ಇದೇ ರೀತಿ ಮುಂದುವರೆದರೆ ನಾವು ನಮ್ಮ ಸಂಸ್ಕೃತಿಯನ್ನು ಕಳೆದುಕೊಳ್ಳಬೇಕಾಗುತ್ತದೆ. ಈ ತೀರ್ಪಿನಿಂದ ಅನೇಕ ಜನರ ನಂಬಿಕೆಗೆ ನೋವಾಗಿದೆ. ದೇವಾಲಯದ ಸಂಪ್ರದಾಯವನ್ನು ಬದಲಾಯಿಸುವ ಪ್ರಸ್ತಾಪಕ್ಕೆ ಹೆಚ್ಚಿನ ಮಹಿಳೆಯರು ವಿರೋಧ ವ್ಯಕ್ತಪಡಿಸಿದ್ದಾರೆ. ದೇವಾಲಯಕ್ಕೆ ಕಳಂಕ ತರಲು ಈ ವಿಷಯದ ಕುರಿತು ವಿವಾದ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.
ಈಗಾಗಲೇ ಕೇರಳ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ಎಲ್ಲಾ ವಯೋಮಾನದ ಮಹಿಳೆಯರ ಪ್ರವೇಶಕ್ಕೆ ಸುಪ್ರೀಂ ಕೋರ್ಟ್ ಸಾಂವಿಧಾನಿಕ ಪೀಠ ಅನುಮತಿ ನೀಡಿದ್ದು ತೀರ್ಪು ಪ್ರಕಟಿಸಿದೆ. ಐವರು ಸದಸ್ಯರ ಸಾಂವಿಧಾನಿಕ ಪೀಠ ತೀರ್ಪು ನೀಡಿದ್ದು ಈ ಮೂಲಕ ಮಹಿಳೆಯರ ಸಮಾನತೆಯನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ಆದರೆ ನಮ್ಮ ನಂಬಿಕೆ ಹಾಗೇ ಇರಲಿ. ಅವಿವೇಕದಿಂದ ವರ್ತಿಸಿ ದೇವಾಲಯಕ್ಕೆ ಕಳಂಕ ತರುವುದು ಬೇಡ. ಜೊತೆಗೆ ಕಾನೂನು ಕೂಡ ಗೌರವಿಸೋಣ ಎಂದು ಹೇಳಿದರು.
ಪ್ರಾರ್ಥನೆಗೆ ಯಾವುದೇ ತಾರತಮ್ಯ ಇರಬಾರದು ನಿಜ. ದೈಹಿಕ ಆಧಾರದ ಮೇಲೆ ತಾರತಮ್ಯ ಮಾಡಬಾರದು ಅನ್ನುವುದು ಕೂಡ ನಿಜ. ಯಾರನ್ನೂ ಹಿಂದೂ ಧರ್ಮದಲ್ಲಿ ತಾರತಮ್ಯದಿಂದ ನೋಡಲಾಗುತ್ತಿಲ್ಲ. ಇಲ್ಲಸಲ್ಲದ ಅಪವಾದ ಹಾಕಿ ಶಬರಿಮಲೆ ಕ್ಷೇತ್ರಕ್ಕೆ ಕಳಂಕ ತರಬೇಡಿ. ಎಲ್ಲವೂ ದೇವರ ಇಚ್ಛೆಯಂತೆ ನಡೆಯಲಿದೆ. ಮುಂದೆ ಏನಾಗುತ್ತದೆ ಅನ್ನೋದನ್ನು ಕಾದು ನೋಡೋಣ. ಆದರೆ ಈಗ ಕಾನೂನು ಗೌರವಿಸೋಣ ಎಂದು ಹೇಳಿದರು.