ಮಂಗಳೂರು, ಮೇ 18 (DaijiworldNews/MS): ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಪ್ರೊಬೆಷನರಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ 7 ತಿಂಗಳ ಗರ್ಭಿಣಿಯಾಗಿದ್ದ ಕೋಲಾರ ಮೂಲದ ಮಹಿಳಾ ಪೊಲೀಸ್ ಅಧಿಕಾರಿ ಶಾಮಿಲಿ (24 ವರ್ಷ) ಕೊರೊನಾ ಸೋಂಕಿಗೆ ಸಾವನ್ನಪ್ಪಿದ್ದಾರೆ.
ಕೊರೊನಾ ಸೋಂಕಿಗೆ ತುತ್ತಾದ ಇವರನ್ನು ಮೇ 2 ರಂದು ಕೋಲಾರದ ಆರ್ಎಂ ಜಲಪ್ಪ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೆ.18ರ ಮುಂಜಾನೆ 4.30 ಕ್ಕೆ ಸಾವನ್ನಪ್ಪಿದ್ದಾರೆ. ಗರ್ಭಿಣಿಯಾಗಿರುವ ಹಿನ್ನಲೆಯಲ್ಲಿ, ಇವರಿಗೆ ಲಸಿಕೆ ನೀಡಿರಲಿಲ್ಲ.
2021 ಜನವರಿ 11 ರಂದು ದಕ್ಷಿಣ ಕನ್ನಡ ಪೊಲೀಸ್ ಇಲಾಖೆಯಲ್ಲಿ ಸೇವೆಗಾಗಿ ಸೇರ್ಪಡೆಯಾಗಿದ್ದು ದ.ಕ ಎಸ್ ಪಿ ಕಚೇರಿ ಪ್ರೊಬೆಷನರಿ ಪಿ ಎಸ್ ಐ. ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಗರ್ಭಿಣಿಯಾಗಿದ್ದ ಕಾರಣ ಒಂದು ತಿಂಗಳ ಹಿಂದೆಯೆ ರಜೆ ಪಡೆದು ತಮ್ಮ ಊರಾದ ಕೋಲಾರಕ್ಕೆ ತೆರಳಿದ್ದರು.
ಈ ಕುರಿತು ಕರ್ನಾಟಕದ ಡಿಜಿಪಿ ಪ್ರವೀಣ್ ಸೂದ್ ಅವರು, ತಮ್ಮ ಟ್ವೀಟರ್ ಖಾತೆಯಲ್ಲಿ ಮಾಹಿತಿ ನೀಡಿದ್ದಾರೆ. ಪೊಲೀಸ್ ಕುಟುಂಬದಲ್ಲಿ ಕಿರಿಯ ಸದಸ್ಯರಾಗಿರುವ ಶಾಮಿಲಿ ಕೋವಿಡ್ ಗೆ ಬಲಿಯಾಗಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಎಲ್ಲರೂ ಕೋವಿಡ್ ನಿಯಮ ಪಾಲಿಸಿ ಪೊಲೀಸರೊಂದಿಗೆ ಸಹಕರಿಸಿ, ಸುರಕ್ಷಿತವಾಗಿರಿ ಎಂದು ಈ ವೇಳೆ ಮನವಿ ಮಾಡಿದ್ದಾರೆ
ಇವರ ನಿಧನಕ್ಕೆ ಕರ್ನಾಟಕ ಪೊಲೀಸ್ ಇಲಾಖೆಯೇ ಕಂಬನಿ ಮಿಡಿದಿದೆ.