ಮೂಡುಬಿದಿರೆ, ಸೆ 28 (MSP) : ಇಲ್ಲಿನ ಪುರಸಭಾ ವ್ಯಾಪ್ತಿಯ ಪ್ರಾಂತ್ಯ ಶಾಲೆಯ ಬಳಿ ಕುಟುಂಬದವರೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಯುವತಿಯನ್ನು, ಆಕೆಯ ಪ್ರಿಯಕರನೇ ಮಾರಣಾಂತಿಕವಾಗಿ ಹಲ್ಲೆಗೈದು ಹತ್ಯೆ ಮಾಡಿ ಅದೇ ಮನೆಯಲ್ಲಿ ಪ್ರಿಯಕರನೂ ನೇಣಿಗೆ ಶರಣಾದ ಬೀಭತ್ಸ ಘಟನೆ ಸೆ.28 ರ ಶುಕ್ರವಾರ ನಡೆದಿದೆ.
ಪ್ರಿಯಕರ ದಾಳಿಯಿಂದ ಗಂಭೀರವಾಗಿ ಗಾಯಗೊಂಡ ಯುವತಿಯನ್ನು ಮೂಡುಬಿದಿರೆ ಖಾಸಗಿ ಆಸ್ಪತ್ರೆ ಸಾಗಿಸಲಾಯಿತಾದರೂ ಆಕೆ ಸಾವನ್ನಪ್ಪಿದ್ದಾಳೆ.
ಚರಿಷ್ಮಾ ಪೂಜಾರಿ(20) ಪ್ರಾಂತ್ಯ ಬಳಿಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಈ ಸಂದರ್ಭದಲ್ಲಿ ಆಕೆಯ ಪ್ರಿಯಕರ ಸಂಬಂಧಿ ಮಂಗಳೂರು ಬಜಾಲ್ ಮೂಲದ ಲೋಹಿತ್ ಎಂಬಾತ ಅಲ್ಲಿಗೆ ಬಂದಿದ್ದಾನೆ. ತಾಯಿ ಕಾರ್ಕಳ ತಾಲೂಕು ಪಂಚಾಯಿತಿ ಸಿಬ್ಬಂದಿಯಾಗಿದ್ದು, ಮನೆಯಲ್ಲಿ ಚರಿಷ್ಮಾ ಒಬ್ಬಳೇ ಇದ್ದಳು ಎನ್ನಲಾಗಿದೆ. ಇದೇ ಸಂದರ್ಭವನ್ನು ಬಳಸಿ ಯುವಕ ಈ ಕೃತ್ಯ ಗೈದಿದ್ದಾನೆ. ಯುವತಿಗೆ ಕುತ್ತಿಗೆಗೆ ಚಾಕುವಿನಿಂದ ಇರಿದು, ಬಳಿಕ ಆಕೆಯ ತಲೆಗೆ ಸುತ್ತಿಗೆಯಿಂದ ಬಡಿದ್ದಾನೆ ಎನ್ನಲಾಗಿದೆ. ಬಳಿಕ ಆತ ನೇಣು ಬಿಗಿದು ಮನೆಯ ಒಳಗಡೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಮೂಡಬಿದಿರೆ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ. ಮೂಡುಬಿದಿರೆ ಪೊಲೀಸರು ಪ್ರಕರಣದ ಕುರಿತು ತನಿಖೆ ನಡೆಸುತ್ತಿದ್ದಾರೆ.