ನ್ಯೂಯಾರ್ಕ್, ಸೆ28(SS): ಪ್ರಧಾನಿ ನರೇಂದ್ರ ಮೋದಿ ಹಾಗೂ ಫ್ರೆಂಚ್ ಅಧ್ಯಕ್ಷ ಇಮ್ಯಾನ್ಯುವೆಲ್ ಮ್ಯಾಕ್ರೋನ್ ಅವರು ವಿಶ್ವಸಂಸ್ಥೆಯ ಚಾಂಫಿಯನ್ ಆಪ್ ದಿ ಅರ್ಥ್ ಪ್ರಶಸ್ತಿಗೆ ಆಯ್ಕೆಯಾಗಿರುವುದಾಗಿ ಮೂಲಗಳಿಂದ ತಿಳಿದುಬಂದಿದೆ.
ಇದು ವಿಶ್ವದ ಅತ್ಯಂತ ದೊಡ್ಡದಾದ ಪರಿಸರ ಪ್ರಶಸ್ತಿಯಾಗಿದ್ದು, ಅಂತಾರಾಷ್ಟ್ರೀಯ ಸೌರ ಶಕ್ತಿ ರಾಷ್ಟ್ರಗಳ ಮೈತ್ರಿಯಲ್ಲಿ ಮಾಡಿದ ಅನುಪಮ ಕೆಲಸ ಹಾಗೂ ಪರಿಸರ ಸಂರಕ್ಷಣೆಯಲ್ಲಿ ಹೊಸ ಕ್ಷೇತ್ರಗಳ ಪ್ರೋತ್ಸಾಹದ ಹಿನ್ನೆಲೆಯಲ್ಲಿ ಈ ಪ್ರಶಸ್ತಿ ನೀಡಲಾಗುತ್ತಿದೆ. 2022 ರೊಳಗೆ ಭಾರತವನ್ನು ಪ್ಲಾಸ್ಟಿಕ್ ಮುಕ್ತ ರಾಷ್ಟ್ರವನ್ನಾಗಿಸುವ ನಿಟ್ಟಿನಲ್ಲಿ ನರೇಂದ್ರಮೋದಿ ಅವರ ಸಂಕಲ್ಪ ಹಾಗೂ ಪರಿಸರ ರಕ್ಷಣೆ ನಿಟ್ಟಿನಲ್ಲಿ ಮ್ಯಾಕ್ರೋನ್ ಅವರ ಕಾರ್ಯವನ್ನು ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಪರಿಸರದ ಜಾಗತಿಕ ಒಪ್ಪಂದಕ್ಕಾಗಿ ಮಾಡುತ್ತಿರುವ ಕೆಲಸಕ್ಕಾಗಿ ಮ್ಯಾಕ್ರನ್ ಅನ್ನು ಈ ಪ್ರಶಸ್ತಿಗೆ ಯುಎನ್ಇಪಿ ಆಯ್ಕೆ ಮಾಡಿದೆ. ಅಲ್ಲದೆ, 2022ರೊಳಗೆ ಭಾರತದಲ್ಲಿ ಏಕ ಬಳಕೆಯ ಪ್ಲಾಸ್ಟಿಕ್ ಮುಕ್ತ ರಾಷ್ಟ್ರವನ್ನು ಮಾಡುವುದಕ್ಕೆ ಪ್ರಧಾನಿ ಮೋದಿ ಸಂಕಲ್ಪ ತೊಟ್ಟಿರುವುದಕ್ಕೆ ಸಹ 'ಚಾಂಪಿಯನ್ಸ್ ಆಫ್ ದಿ ಅರ್ಥ್' ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಮಾತ್ರವಲ್ಲ, ವಿಶ್ವದ ಮೊದಲ ಸಂಪೂರ್ಣ ಸೌರಶಕ್ತಿ ಅವಲಂಬಿತ ವಿಮಾನ ನಿಲ್ದಾಣವಾದ ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಹ ಪ್ರಶಸ್ತಿಗೆ ಆಯ್ಕೆಯಾಗಿದೆ.