ಪಣಜಿ,ಸೆ 27 (MSP): ದೇಶದಲ್ಲಿ ಚುನಾವಣೆ ಗೆಲ್ಲಲು ಹಣದ ಹೊಳೆಯನ್ನೇ ಹರಿಸಬೇಕಾಗುವ ಪರಿಸ್ಥಿತಿ ಇದೆ. ಇಂತಹ ವಾತಾವರಣದಲ್ಲಿ ದುಡ್ಡು ಖರ್ಚು ಮಾಡಿಲ್ಲ ಅಂದ್ರೆ ಭಗವಾನ್ ಶ್ರೀರಾಮ ಕೂಡಾ ಚುನಾವಣೆಯಲ್ಲಿ ಸ್ವರ್ಧಿಸಿ ಗೆಲ್ಲಲು ಸಾಧ್ಯವಿಲ್ಲ ಎಂದು ಗೋವಾ ರಾಜ್ಯದ ಆರ್ ಎಸ್ ಎಸ್ ನ ಮಾಜಿ ಅಧ್ಯಕ್ಷ ಸುಭಾಷ್ ವೆಲ್ಲಿಂಗ್ಕರ್ ಹೇಳಿದ್ದಾರೆ.
ಬುಧವಾರ ಪಣಜಿಯಲ್ಲಿ ಗೋವಾ ಸುರಕ್ಷಾ ಮಂಚ್ (ಜಿಎಸ್ಎಂ) ಯುವ ಸಮಾವೇಶದಲ್ಲಿ ಮಾತನಾಡಿದ ಅವರು ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ಚುನಾವಣೆಯಲ್ಲಿ ಆಯ್ಕೆಯಾಗಲು ಹಣ ಖರ್ಚು ಮಾಡಬೇಕಾಗುತ್ತದೆ. ಮತದಾರರಲ್ಲಿ ಯುವ ಸಮೂಹ ಮತ್ತು ಮಹಿಳಾ ಮತದಾರರು ಪ್ರಮುಖರಾಗಿದ್ದು, ಚುನಾವಣೆಯಲ್ಲಿ, ರಾಜಕಾರಣಿಗಳು ಈ ಎರಡು ವಿಧದ ಜನರನ್ನು ಆಕರ್ಷಿಸಿಸಲು ಹಣದ ಹಾಗೂ ಇನ್ನಿತರ ಉಡುಗೊರೆಗಳ ಅಮಿಷವೊಡ್ಡುತ್ತಿದ್ದಾರೆ ಎಂದು ಆರೋಪಿಸಿದರು. ಚುನಾವಣೆಯ ಸಮಯದಲ್ಲಿ ಅತಿಯಾದ ಹಣವನ್ನು ಬಳಸಿಕೊಳ್ಳುವ ಕಾರಣ ಈಗಿರುವಂತಹ ಪರಿಸ್ಥಿತಿಯಲ್ಲಿ ಶ್ರೀರಾಮನು ಕೂಡಾ ದುಡ್ಡು ಖರ್ಚು ಮಾಡದಿದ್ದರೆ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಾಗುವುದಿಲ್ಲ" ಎಂದು ವೇಲಿಂಗ್ಕಾರ್ ಹೇಳಿದ್ದಾರೆ.
ಇದೇ ವೇಳೆ ಬಿಜೆಪಿ ವಿರುದ್ಧ ಕಿಡಿಕಾರಿದ ವೇಲಿಂಗ್ಕಾರ್, ಭಾರತೀಯ ಜನತಾ ಪಕ್ಷ ನೈತಿಕತೆಯನ್ನು ಕಳೆದುಕೊಂಡಿದ್ದು, ದೇಶದ ಇತರ ರಾಜಕೀಯ ಪಕ್ಷಗಳು ಏನು ಮಾಡುತ್ತಿದ್ದವೂ ಅದನ್ನೇ ಬಿಜೆಪಿ ಕೂಡಾ ಮಾಡುತ್ತಿದೆ ಎಂದು ಕಿಡಿಕಾರಿದರು.